ದಾವಣಗೆರೆ : ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸಲು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಲ್ಲಿನ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಘೋಷಣೆ ಕೂಗುತ್ತ ಬೆಸ್ಕಾಂ ಕಚೇರಿ ತಲುಪಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರ ರೈತ ವಿರೋಧಿಯಾಗಿದ್ದು ವಿದ್ಯುತ್ ಪೂರೈಸದೆ ರಾಜ್ಯವನ್ನು ಕತ್ತಲಲ್ಲಿಟ್ಟಿದೆ ಎಂದು ದೂರಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರಲ್ಲಿ ಒಬ್ಬ ಕಳ್ಳ, ಒಬ್ಬ ಮಳ್ಳ ಇದ್ದಾರೆ. ಕರ್ನಾಟಕವನ್ನು ಕಲೆಕ್ಷನ್ ಕೇಂದ್ರ ಮಾಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ನೂರಾರು ಕೋಟಿ ರೂ. ಪತ್ತೆಯಾಗಿವೆ. ಇದೊಂದು ಎಟಿಎಂ ಸರ್ಕಾರವಾಗಿದ್ದು ಪಂಚ ರಾಜ್ಯಗಳ ಚುನಾವಣೆಗೆ ಇಲ್ಲಿಂದ ಹಣ ಕಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ರೈತ ವಿರೋಧಿಯಾಗಿದ್ದು ವಿದ್ಯುತ್ ಪೂರೈಸಲು ವಿಫಲವಾಗಿದೆ. ರಾಜ್ಯಕ್ಕೆ ಕತ್ತಲೆ ಭಾಗ್ಯ ನೀಡಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರನ್ನು ಸರಿಯಾಗಿ ತಲುಪುತ್ತಿಲ್ಲ. ಗೃಹಲಕ್ಷ್ಮೀ ಯೋಜನೆಯ ಹಣ 50 ಲಕ್ಷ ಮಹಿಳೆಯರಿಗೆ ಮಾತ್ರ ಬಂದಿದೆ. ಒಂದು ಕೆಜಿ ಅಕ್ಕಿಯನ್ನೂ ಸರ್ಕಾರ ನೀಡಿಲ್ಲ. ನೈತಿಕತೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಇದು ವಸೂಲಿ ಸರ್ಕಾರವಾಗಿದ್ದು ಪೊಲೀಸ್ ಠಾಣೆ, ವಿದ್ಯುತ್, ಅಬಕಾರಿ ಇಲಾಖೆಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಈ ಸರ್ಕಾರ ತೊಲಗಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಂಥ 20 ಜನ ಬಂದರೂ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಡೆದಿದೆ. ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಾಯಕರು ಖಜಾನೆಯನ್ನು ಖಾಲಿ ಮಾಡಿದ್ದಾರೆ. ಪಂಚರಾಜ್ಯ ಚುನಾವಣೆಗೆ ಇಲ್ಲಿಂದ ಹಣ ಕಳಿಸಲಾಗುತ್ತಿದೆ. 40 ಪರ್ಸೆಂಟ್ ಸರ್ಕಾರ ಎಂದು ಬಿಜೆಪಿ ಬಗ್ಗೆ ಆರೋಪಿಸುತ್ತಿದ್ದ ಕಾಂಗ್ರೆಸಿಗರು ಮಾಡುತ್ತಿರುವುದೇನು? ಕಮಿಷನ್ ಸರ್ಕಾರ ಯಾವುದು ಎಂದು ಪ್ರಶ್ನಿಸಿದರು.
ಬೆಸ್ಕಾಂ ಚಿತ್ರದುರ್ಗ ವಲಯದ ಮುಖ್ಯ ಇಂಜಿನಿಯರ್ ಕೆ.ವಿ. ಗೋವಿಂದಪ್ಪ ಮತ್ತು ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಜಗದೀಶ್ ಮಾತನಾಡಿ, ಮಂಗಳವಾರದಿಂದ ರೈತರಿಗೆ 5 ಗಂಟೆ ನಿರಂತರ ವಿದ್ಯುತ್ ಪೂರೈಸುವ ಭರವಸೆ ನೀಡಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ, ಪಾಲಿಕೆ ಪ್ರತಿಪಕ್ಷ ನಾಯಕ ಪ್ರಸನ್ನಕುಮಾರ್, ಮಾಜಿ ಮೇಯರ್‌ಗಳಾದ ಬಿ.ಜಿ. ಅಜಯ ಕುಮಾರ್, ಎಸ್.ಟಿ. ವೀರೇಶ್ ಇದ್ದರು.
ಮುಖಂಡರಾದ ಯಶವಂತರಾವ್ ಜಾಧವ್, ಬಿ.ಎಸ್. ಜಗದೀಶ್, ಬಿ.ಎಂ. ಸತೀಶ್, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ, ಶ್ರೀನಿವಾಸ ದಾಸಕರಿಯಪ್ಪ, ಜಿ.ಎಸ್. ಶ್ಯಾಮ್, ರಮೇಶ ನಾಯ್ಕ, ಎಚ್.ಎನ್. ಶಿವಕುಮಾರ್, ಎನ್. ರಾಜಶೇಖರ್, ಶಿವನಗೌಡ ಪಾಟೀಲ್ ಇದ್ದರು.