ಜಿಲ್ಲೆ

ಬಿಜೆಪಿಯಿಂದ ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲಾ ಬಿಜೆಪಿಯಿಂದ ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಉದ್ಯಾನವನದಲ್ಲಿ ಸೆ.11ರಂದು ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ರಾಜನಹಳ್ಳಿ ಶಿವಕುಮಾರ್ ಹೇಳಿದರು.
 ದೇಶದ ಹಿರಿಮೆ ಹಾಗೂ ಗರಿಮೆ ಬಗ್ಗೆ ದೇಶಾಭಿಮಾನ ಬೆಳೆಸುವ ಉದ್ದೇಶದಿಂದ ನನ್ನ ದೇಶ ನನ್ನ ಮಣ್ಣು ಅಭಿಯಾನ ನಡೆಸಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಸಂಸದ ಜಿ.ಎಂ. ಸಿದ್ದೇಶ್ವರ್ ಉದ್ಘಾಟಿಸುವರು. ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರ, ಡಾ.ಎ.ಎಚ್. ಶಿವಯೋಗಿಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
 ಜಿಲ್ಲೆಯ ಐತಿಹಾಸಿಕ ಸ್ಥಳ, ದೇವಸ್ಥಾನ, ಮಹಾಪುರುಷರು, ಸ್ವಾತಂತ್ರೃ ಹೋರಾಟಗಾರರು ಹಾಗೂ ಸೈನಿಕರ ಮನೆಗಳ ಸ್ಥಳದಲ್ಲಿ ಭೂಮಿ ಪೂಜೆ ಮಾಡಿ ಮಣ್ಣನ್ನು ತಂದು ಕಳಸಕ್ಕೆ ಹಾಕಿಸಲಾಗುವುದು. ಜಿಲ್ಲೆಯ ಎಲ್ಲ ನಗರ, ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ.
 ಎಲ್ಲ ಜಿಲ್ಲೆಗಳಿಂದ ಸಂಗ್ರಹಿಸಿದ ಮಣ್ಣಿನ ಕಳಸ ರಾಜ್ಯ ಬಿಜೆಪಿ ಕೇಂದ್ರ ಕಚೇರಿಗೆ ತಲುಪಿಸಲಿದ್ದು ಅಲ್ಲಿಂದ ಅ.30ರಂದು ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ಮಿಸಲಿರುವ ಉದ್ಯಾನವನಕ್ಕೆ ಕಳುಹಿಸಲಾಗುವುದು. ಶಕ್ತಿ ಕೇಂದ್ರದ ಪ್ರತಿ ವಾರ್ಡ್‌ಗಳಲ್ಲಿ 75 ಸಸಿ ನೆಡಲಾಗುವುದು. ಸರ್ಕಾರಿ ಶಾಲೆಗಳ ಬಳಿ ನನ್ನ ದೇಶ ನನ್ನ ಮಣ್ಣು ಸಂರಕ್ಷಣೆ ಮಾಡುವ ಪ್ರತಿಜ್ಞೆಯ ನಾಮಫಲಕ ಹಾಕಲಾಗುವುದು ಎಂದು ತಿಳಿಸಿದರು.
 ಬಿಜೆಪಿ ಜಿಲ್ಲಾ ವಕ್ತಾರ ಡಿ.ಎಸ್.ಶಿವಶಂಕರ್, ಕೊಟ್ರೇಶ್‌ಗೌಡ್ರು, ಎಚ್.ಪಿ. ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿದ್ದರು.