ದಾವಣಗೆರೆ : ಕೃತಕ ಬುದ್ಧಿಮತ್ತೆ ಯಾವುದೇ ಕಾರಣಕ್ಕೂ ಮನುಷ್ಯನ ಕೆಲಸವನ್ನು ಕಿತ್ತುಕೊಳ್ಳುವುದಿಲ್ಲ, ಬದಲಾಗಿ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಭಾರತದಲ್ಲಿ ಗೂಗಲ್ ಕಂಪನಿಯ ಶಿಕ್ಷಣ ವಿಭಾಗದ ಮುಖ್ಯಸ್ಥ, ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಜಯ್ ಜೈನ್ ಹೇಳಿದರು. ನಗರದ ಬಿಐಇಟಿ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗವು ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಸಂದರ್ಭದಲ್ಲಿ ಶನಿವಾರ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಬೆಳ್ಳಿ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಂಪ್ಯೂಟರ್‌ಗಳು 1980ರಲ್ಲಿ ಮತ್ತು ಇಂಟರ್ನೆಟ್ 1990ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದಾಗ ಜನರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದರೆ ಹಾಗಾಗಲಿಲ್ಲ ಎಂದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಮುಂದಿನ 5 ವರ್ಷಗಳಲ್ಲಿ ಮನುಷ್ಯ ಭಾರೀ ಮುನ್ನಡೆ ಸಾಧಿಸಲಿದ್ದಾನೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬಹಳ ವೇಗದಲ್ಲಿ ಪ್ರಗತಿ ಹೊಂದುತ್ತಿದೆ. ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಹೊಂದಿಕೊಳ್ಳಬೇಕು ಮತ್ತು ಕೃತಕ ಬುದ್ಧಿಮತ್ತೆ ಸಾಕ್ಷರತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕುಂಭಕೋಣಮ್‌ನ ಶಾಸ್ತ್ರ ಯೂನಿವರ್ಸಿಟಿ ಶ್ರೀನಿವಾಸ ರಾಮಾನುಜನ್ ಸೆಂಟರ್‌ನ ಮಾಜಿ ಡೀನ್ ಡಾ. ವಿ. ರಾಮಸ್ವಾಮಿ ಮಾತನಾಡಿ, ಭಾರತದಲ್ಲಿ 70 ಲಕ್ಷ ವಿದ್ಯಾರ್ಥಿಗಳು ಪ್ರತಿ ವರ್ಷ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರವೇಶ ಪರೀಕ್ಷೆ ಬರೆಯುತ್ತಾರೆ. ವಿದ್ಯಾರ್ಥಿಗಳ ಮೇಲೆ ಭಾರೀ ಮಾನಸಿಕ ಒತ್ತಡ ಹೇರಲಾಗುತ್ತಿದೆ. ಪ್ರವೇಶ ಪರೀಕ್ಷೆಗಳ ಪ್ರಸ್ತುತತೆಯನ್ನು ಪ್ರಶ್ನೆ ಮಾಡಿದ ಅವರು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿದೆ ಎಂದರು. ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಕಾಲೇಜಿನಲ್ಲಿ ಎಸ್.ಟಿ.ಪಿ.ಐ. ವತಿಯಿಂದ ಸ್ಟಾರ್ಟ್‌ಅಪ್ ಕೇಂದ್ರವನ್ನು ಸ್ಥಾಪಿಸಲಿದ್ದು ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು. ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ ಕಾಲೇಜಿನ ಬೆಳವಣಿಗೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಡಾ. ವಿನುತಾ ಎಚ್.ಪಿ, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಬಿ, ಡಾ. ದೇವೇಂದ್ರಪ್ಪ ಕೆ.ಸಿ. ಇದ್ದರು.