ಜಿಲ್ಲೆ

ಗುರು ಸಿದ್ಧರಾಮೇಶ್ವರ ಅಧ್ಯಯನ ಪೀಠ ಸ್ಥಾಪಿಸಿ

ರಮೇಶ ಜಹಗೀರದಾರ್

ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶ್ರೀ ಶಿವಯೋಗಿ ಗುರು ಸಿದ್ಧರಾಮೇಶ್ವರ ಅಧ್ಯಯನ ಪೀಠ ಆರಂಭಿಸುವಂತೆ ಜಿಲ್ಲಾ ಭೋವಿ ಸಮಾಜ ಆಗ್ರಹಿಸಿದೆ.
 ಸಮಾಜದ ಮುಖಂಡರು ಶನಿವಾರ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.
 ಹನ್ನೆರಡನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬರಾದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರೂ ಒಬ್ಬರು. ಅವರ ಜೀವನ ಚರಿತ್ರೆ ಸಂಬಂಧ ಅನೇಕ ಆಧಾರಗಳು ವಚನ, ಕಾವ್ಯ, ಶಾಸನ, ಐತಿಹ್ಯಗಳಲ್ಲಿ ದೊರೆಯುತ್ತವೆ.
 ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ ಇವರ ಜನ್ಮ ಸ್ಥಳವಾಗಿದೆ. ಕೆರೆ, ಕಟ್ಟೆಗಳನ್ನು ಕಟ್ಟಿಸಿ ಕರ್ಮ ಯೋಗಿ ಎನಿಸಿದರು. ಅನುಭವ ಮಂಟಪದಲ್ಲಿ ಮಹಾ ಶಿವಯೋಗಿಯಾದರು. ಸಿದ್ಧರಾಮನ ವಚನ, ಸ್ವರ ವಚನ, ಬಸವ ಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ವೈವಿಧ್ಯಮಯ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ.
 ಇವರ ಸಾಹಿತ್ಯ, ವಚನ, ಕಾವ್ಯ ಮುಂದಿನ ಪೀಳಿಗೆಯ ಅಧ್ಯಯನಕ್ಕಾಗಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
 ಸಮಾಜದ ಜಿಲ್ಲಾಧ್ಯಕ್ಷ ಪಿ. ಶ್ರೀನಿವಾಸ್, ಮಹಾನಗರ ಪಾಲಿಕೆ ಸದಸ್ಯ ಆರ್. ಶಿವಾನಂದ, ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎಚ್. ಮಂಜುನಾಥ್, ತಾಲೂಕು ಅಧ್ಯಕ್ಷ ಜಿ. ಚೌಡಪ್ಪ, ಸಮಾಜದ ಮುಖಂಡರಾದ ಎಸ್. ಹನುಮಂತಪ್ಪ, ಜಲ್ಲಿ ನಾಗರಾಜ್, ಚೌಡೇಶ್, ಆನಂದ್, ಶ್ರೀನಿವಾಸ್, ದಶರಥ, ರುದ್ರೇಶ್, ಮಂಜುನಾಥ್, ಧರ್ಮ, ವೀರೇಶ್, ಎ.ಎಸ್. ಮಂಜುನಾಥ ಇದ್ದರು.