ದಾವಣಗೆರೆ : ಭಗವದ್ಗೀತೆಯಲ್ಲಿ ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶುಕ್ರವಾರ, ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ 5ನೇ ದಿನದ ಕಾರ್ಯಕ್ರಮದಲ್ಲಿ ‘ಪ್ರಸ್ತುತ ಯುವ ಜನಾಂಗಕ್ಕೆ ಲೌಕಿಕ ಹಾಗೂ ಧಾರ್ಮಿಕ’ ಎಂಬ ವಿಷಯದ ಕುರಿತು ಮಾತನಾಡಿದರು.
ಭಗವದ್ಗೀತೆಯು ಲೌಕಿಕ, ಆಧ್ಯಾತ್ಮಿಕ, ಧಾರ್ಮಿಕ ಮಾರ್ಗದರ್ಶಿ ಸೂತ್ರವಾಗಿದೆ. ಅದರಲ್ಲಿ ಬರುವ ಶ್ಲೋಕಗಳು ನಮ್ಮ ಜೀವನದಲ್ಲಿ ಸಾಗಬೇಕಾದ ದಾರಿಯನ್ನು ತೋರಿಸಿಕೊಡುತ್ತವೆ, ಮಕ್ಕಳಿಗೆ ಗುರಿಯತ್ತ ಸಾಗಲು ಮಾರ್ಗದರ್ಶನ ಮಾಡುತ್ತವೆ ಎಂದು ತಿಳಿಸಿದರು.
ಬದುಕಿನಲ್ಲಿ ನಾವು ನಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸದೆ ಇಡೀ ಸಮಾಜಕ್ಕೆ ಒಳಿತು ಮಾಡಬೇಕು. ನಮ್ಮಿಂದಾಗುವ ಕೊಡುಗೆ ನೀಡಬೇಕು, ಆ ಮೂಲಕ ಹೆಜ್ಜೆಗುರುತನ್ನು ಮೂಡಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ವಯಸ್ಸಾದ ತಂದೆ, ತಾಯಿ ನಮ್ಮಿಂದ ಹಣ ಬಯಸುವುದಿಲ್ಲ, ಪ್ರೀತಿಯಿಂದ ಆಡುವ ನಾಲ್ಕು ಮಾತುಗಳನ್ನು ಬಯಸುತ್ತಾರೆ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಧಾರ್ಮಿಕ ಭಾವನೆ ಮತ್ತು ಸಂಸ್ಕೃತಿಯು ಕೇವಲ ಹೇಳುವುದು, ಕಲಿಸುವುದರಿಂದ ಬರುವುದಿಲ್ಲ. ಬದಲಾಗಿ ಅದನ್ನು ಅನುಸರಿಸಬೇಕು. ಮೌಲ್ಯಗಳನ್ನು ಪಾಠ ಮಾಡಿ, ಪುಸ್ತಕದಲ್ಲಿ ಬರೆದು ತೋರಿಸುವುದರಿಂದ ಹೆಚ್ಚು ಪರಿಣಾಮ ಆಗುವುದಿಲ್ಲ, ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು ನಾವು ಹೇಳಿದಂತೆ ಮಾಡುವುದಿಲ್ಲ, ನಾವು ಮಾಡಿದ್ದನ್ನು ಅನುಕರಣೆ ಮಾಡುತ್ತಾರೆ. ಆದ್ದರಿಂದ ನಮ್ಮ ನಡೆ, ನುಡಿ ಶುದ್ಧವಾಗಿಬೇಕು ಎಂದು ವಿವರಿಸಿದರು.
ಧರ್ಮವು ತತ್ವ ಮತ್ತು ಆಚಾರ ಎಂಬ ಎರಡು ಪ್ರಮುಖ ಅಂಶಗಳನ್ನು ಹೊಂದಿದೆ. ನಾವು ಮೂಲ ತತ್ವ ಬಿಟ್ಟು ಆಚಾರ ಹಿಡಿದು ಹೊರಟಿದ್ದೇವೆ. ಇಂದಿನ ಮಕ್ಕಳಿಗೆ ಧರ್ಮ, ಸಂಸ್ಕೃತಿ, ತತ್ವಗಳ ಬಗ್ಗೆ ತಿಳಿಸಿ ಕೊಡಬೇಕಾಗಿದೆ ಎಂದು ಹೇಳಿದರು.
ಅಹಂಕಾರ ಕಳೆದು ಬಾಗಿದರೆ ಭಗವಂತ ಮೇಲೆ ಬಂದು ಕೈ ಹಿಡಿಯುತ್ತಾನೆ. ಲೌಕಿಕ ಮತ್ತು ಧಾರ್ಮಿಕ ಜೀವನವನ್ನು ಸಮನಾಗಿ ಸ್ವೀಕರಿಸಬೇಕು. ಮನಸ್ಸಿನ ಏಕಾಗ್ರತೆಗೆ ತನ್ಮಯತೆ, ಸಾಂಗತ್ಯ ಚೆನ್ನಾಗಿರಬೇಕು. ಶ್ರದ್ಧೆ ಇಲ್ಲದ ಯಾವುದೇ ಕೆಲಸ ಸಫಲತೆ ಕಾಣಲು ಸಾಧ್ಯವಿಲ್ಲ. ತಂದೆ, ತಾಯಿಗಳ ಸಂಸ್ಕಾರ ಮಕ್ಕಳಿಗೆ ಕಲಿಸಬೇಕು, ಜೀವನದಲ್ಲಿ ಶ್ರದ್ಧೆ, ಪೂಜೆ, ಸಂಸ್ಕಾರಗಳು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಮತ್ತು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.
...
(((ಬಾಕ್ಸ್)))
ಲಕ್ಷ್ಮೀ ಶೋಭಾನ ಪಾರಾಯಣ
ಮಹೋತ್ಸವದ ಅಂಗವಾಗಿ ಲಕ್ಷ್ಮೀ ಶೋಭಾನ ಸಾಮೂಹಿಕ ಪಾರಾಯಣ ನಡೆಯಿತು. ಶ್ರೀರಂಗಂನ ಸರಸ್ವತಿ ಶ್ರೀಪತಿ ಅವರು ಮಾರ್ಗದರ್ಶನ ನೀಡಿ ಪದ್ಯದ ಅರ್ಥ ಮತ್ತು ತಾತ್ಪರ್ಯವನ್ನು ಹೇಳಿದರು. ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದ ಭಕ್ತರು ಧ್ವನಿಗೂಡಿಸಿದರು. ಜತೆಗೆ ಲಕ್ಷ್ಮೀದೇವಿಯ ಮೂರ್ತಿಗೆ ಕುಂಕುಮಾರ್ಚನೆ ಮಾಡಲಾಯಿತು.
ನಂತರ ವಿದ್ವಾನ್ ಕಪಿಲಾಚಾರ್ಯ ಗಲಗಲಿ ಅವರು ಲಕ್ಷ್ಮೀ ಶೋಭಾನದ ಕುರಿತು ಪ್ರವಚನ ನೀಡಿದರು.
...