ದಾವಣಗೆರೆ : ಭದ್ರಾ ಜಲಾಶಯದ ನೀರು ಬಿಡುಗಡೆ ಸಂಬಂಧ ಜಿಲ್ಲೆಗೆ ಮತ್ತೆ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಕೆ.ಬಿ. ಕೊಟ್ರೇಶ್ ಹೇಳಿದ್ದಾರೆ.
ಶಿವಮೊಗ್ಗದ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದಾವಣಗೆರೆ ಜಿಲ್ಲೆಯ ರೈತರ ಹಿತ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಡದಂಡ ನಾಲೆಗೆ ಜ. 10, ಬಲದಂಡ ನಾಲೆಗೆ ಜ. 20 ರಿಂದ ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ ಮತ್ತೆ ಆನ್ ಆ್ಯಂಡ್ ಆಫ್ ಜಾರಿಗೊಳಿಸಿರುವುದು ಭದ್ರಾ ಅಚ್ಚುಕಟ್ಟು ಪ್ರದೇಶದವರಿಗೆ ನಿರಾಸೆ ತಂದಿದೆ ಎಂದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಧು ಬಂಗಾರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ರೈತರಿಗೆ ನೀರು ಕೊಡುವ ಸಲುವಾಗಿ, ದಾವಣಗೆರೆಗೆ ನೀರು ಸಿಗದಿರುವ ರೀತಿಯಲ್ಲಿ ತೀರ್ಮಾನಿಸಲಾಗಿರುವುದು ಸಹಿಸಲಾಗದು. ಇದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.