ಜಿಲ್ಲೆ

ಭದ್ರಾ ಮುಖ್ಯ ಇಂಜಿನಿಯರ್ ಕಚೇರಿಗೆ 9 ರಂದು ಮುತ್ತಿಗೆ

ರಮೇಶ ಜಹಗೀರದಾರ್

ದಾವಣಗೆರೆ  : ಸೀಳಿರುವ ನಾಲೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಜು. 9 ರಂದು ಶಿವಮೊಗ್ಗದ ಭದ್ರಾ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಗಾರು ಹಂಗಾಮಿನ ಬೆಳೆಗಾಗಿ ಭದ್ರಾ ನಾಲೆಗೆ ಜುಲೈ ಮೊದಲ ವಾರವೇ ನೀರು ಹರಿಸಬೇಕಿತ್ತು. ಆದರೆ ಇದುವರೆಗೂ ತೀರ್ಮಾನವಾಗಿಲ್ಲ ಎಂದರು.  ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನಡೆಸಿರುವ ಕಾಮಗಾರಿಗೆ ಸಂಬಂಧಿಸಿದಂತೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇರುವ ಆಕ್ಷೇಪಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.  ಜಿಲ್ಲಾ ರೈತ ಒಕ್ಕೂಟದ ನೇತೃತ್ವದಲ್ಲಿ ನಿಯೋಗ ಸಿಎಂ ಮತ್ತು ಡಿಸಿಎಂ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳಿದರು. ಸ್ಥಳಕ್ಕೆ ಭೇಟಿ ನೀಡಿ ನಿರ್ಧರಿಸುವುದಾಗಿ ಡಿ.ಕೆ. ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.  ಹೊಸದುರ್ಗ ತಾಲೂಕು ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಮಾಡಲು ಆಕ್ಷೇಪವಿಲ್ಲ. ಆದರೆ, ನಾಲೆ ಸೀಳಿ ನಡೆಸಿರುವ ಕಾಮಗಾರಿಯ ಬಗ್ಗೆ ತಕರಾರುಗಳಿವೆ. ಲಿಫ್ಟ್ ಅಥವಾ ಜಾಕ್‌ವೆಲ್ ಮೂಲಕ ನೀರು ಪೂರೈಕೆಗೆ ಅವಕಾಶಗಳಿದ್ದವು. ನಾಲೆ ಸೀಳಿರುವುದರಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ತೊಂದರೆ ಆಗಲಿದೆ ಎಂಬುದನ್ನು ವಿವರಿಸಿದ್ದೇವೆ ಎಂದರು.  ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪಕ್ಷದ ಮುಖಂಡರು ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದು, ಕಾರ್ಯಕರ್ತರಿಗೆ ವಿಶ್ವಾಸ ಮೂಡುವಂತೆ ನಡೆದುಕೊಳ್ಳಲಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.  ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಭೆಯಲ್ಲಿ ಜಿಲ್ಲೆಯ ಕೆಲ ಮುಖಂಡರ ಜತೆಗೆ ಪಾಲ್ಗೊಂಡಿದ್ದೆ. ನಾಲ್ಕು ಗೋಡೆಗಳ ನಡುವೆ ಹಲವು ರೀತಿಯ ಚರ್ಚೆಗಳಾಗಿವೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಇಷ್ಟಪಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.  ಮಾಜಿ ಶಾಸಕ ಬಸವರಾಜ ನಾಯ್ಕ, ಜಿಲ್ಲಾ ರೈತ ಒಕ್ಕೂಟದ ಕೊಳೇನಹಳ್ಳಿ ಬಿ.ಎಂ.ಸತೀಶ್, ಬಿಜೆಪಿ ಮುಖಂಡರಾದ ಚಂದ್ರಶೇಖರ್, ಲೋಕಿಕೆರೆ ನಾಗರಾಜ್, ಧನಂಜಯ್ ಕಡ್ಲೆಬಾಳ್ ಇದ್ದರು.