ಜಿಲ್ಲೆ

ಬಲದಂಡೆ ಕಾಮಗಾರಿ ಸ್ಥಗಿತಗೊಳಿಸಿ

ರಮೇಶ ಜಹಗೀರದಾರ್

ದಾವಣಗೆರೆ  : ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಗೊಳಿಸಿ ಅಚ್ಚುಕಟ್ಟು ಪ್ರದೇಶದ ಹಿನ್ನೀರು ಅಥವಾ ಬೇರೆ ಮಾರ್ಗದಿಂದ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವಂತೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.  ಭದ್ರಾ ಜಲಾಶಯದ ಹೊಸ್ತಿಲಲ್ಲಿನ ಬಲದಂಡೆ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 1236 ಗ್ರಾಮಗಳಿಗೆ ಹಾಗೂ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಈಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಈ ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿದರು.  ಬಲದಂಡೆಯನ್ನು ಸೀಳಿ ನೀರು ಒಯ್ಯಲಾಗುತ್ತಿದೆ. ಇದರಿಂದ ಕಾಲುವೆಯ ನೀರಿನ ಸಹಜ ಹರಿವಿಗೆ ಅಡ್ಡಿಯಾಗಲಿದೆ. ಆರಂಭದಲ್ಲಿಯೇ ನೀರಿನ ಹರಿವಿನ ವೇಗ ಕಡಿಮೆ ಆದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಹೊನ್ನಾಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೊನೆಯ ಭಾಗದವರೆಗೆ ನೀರು ಸರಾಗವಾಗಿ ಹರಿಯುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.  ಭದ್ರಾ ಮೇಲ್ದಂಡೆ ಯೋಜನೆಯಡಿ ಜಲಾಶಯದಿಂದ ಹೊಸದುರ್ಗ, ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕು ಸೇರಿದಂತೆ ಬಯಲು ಸೀಮೆಯ ಹಳ್ಳಿಗಳಿಗೆ ನಿತ್ಯ 30 ಕ್ಯೂಸೆಕ್‌ನಂತೆ ವರ್ಷವಿಡೀ ಕುಡಿಯುವ ನೀರು ಕೊಡಲು 1 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.  ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲೆಯ ಎಲ್ಲ ಶಾಸಕರು, ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರ ಸಭೆ ಕರೆದು ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.  ಶಾಸಕರ ಮನವಿ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಶೀಘ್ರವೇ ರೈತ ಮುಖಂಡರ ಸಭೆ ಕರೆಯುವುದಾಗಿ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ರೈತ ಮುಖಂಡರಾದ ರಾಮಗೊಂಡನಹಳ್ಳಿ ಶರಣಪ್ಪ, ಮಲ್ಲಿಕಾರ್ಜುನ್, ಅತ್ತಿಗೆರೆ ಮಹಾದೇವಪ್ಪ, ಬಾಡದ ರವಿ ಇದ್ದರು.