ಜಿಲ್ಲೆ

ಭದ್ರಾ ಮೇಲ್ದಂಡೆಗೆ ನೀರು ಸ್ಥಗಿತಗೊಳಿಸಲು ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ : ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸುವ ನೀರನ್ನು ತಕ್ಷಣ ಸ್ಥಗಿತ ಮಾಡಬೇಕು ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ ಆಗ್ರಹಿಸಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ನೀರನ್ನು ತುಮಕೂರು, ಚಿತ್ರದುರ್ಗ ಸೇರಿ ಹಲವು ಭಾಗಗಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ತುಂಗಾ ನದಿ ನೀರು ಬಳಕೆ ಮಾಡಿಕೊಳ್ಳುವ ಭರವಸೆ ನೀಡಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ತರಲಾಯಿತು. ಆದರೆ, ತುಂಗಾ ನದಿಯಿಂದ ಈ ನೀರು ಭ್ರದಾ ಜಲಾಶಯಕ್ಕೆ ತರಲೇ ಇಲ್ಲ ಎಂದು ತಿಳಿಸಿದರು.  ಡಿಸೆಂಬರ್ ಮೊದಲ ವಾರದಿಂದ ವಿ.ವಿ. ಸಾಗರಕ್ಕೆ 700 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ವಿ.ವಿ ಸಾಗರ ಕೋಡಿ ಬಿದ್ದಿದೆ. ಆದರೆ, ಈವರೆಗೆ ಭದ್ರಾ ಜಲಾಶಯದಿಂದ ಹರಿಸುವ ನೀರು ಸ್ಥಗಿತ ಮಾಡಿಲ್ಲ. ಈಗಾಗಲೇ ನಾಲ್ಕು ಟಿಎಂಸಿ ಅಡಿ ನೀರು ಭದ್ರಾದಿಂದ ಖಾಲಿ ಆಗಿದೆ. ಜಿಲ್ಲೆಯ ಶಾಸಕರು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಬೇಸಿಗೆ ಬೆಳೆಗೆ 31 ಟಿಎಂಸಿ ಅಡಿ ನೀರು ಬೇಕಿದೆ. ಜಲಾಶಯ ಭರ್ತಿಯಾದರೆ ಎರಡು ವರ್ಷಗಳಿಗೆ ಸಾಕಾಗುತ್ತದೆ. ಆದರೆ, ಈಗ ಒಂದು ವರ್ಷಕ್ಕೂ ಸಾಕಾಗುತ್ತಿಲ್ಲ. ಕಾಡಾ ತೀರ್ಮಾನ ಕೂಡ ಬೆಲೆ ಇಲ್ಲದಂತೆ ಆಗಿದೆ ಎಂದರು.  ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡಲು ಐಸಿಸಿ ಸಭೆ ನಡೆಸುವುದು ಕಡ್ಡಾಯ ಮಾಡಬೇಕು. ಓಟಿಗಾಗಿ ಇಂತಹ ಗಿಮಿಕ್ ಮಾಡಲಾಗಿದೆ. ತುಂಗಾದಿಂದ ನೀರು ಎತ್ತಿ ಚಿತ್ರದುರ್ಗ ಜಿಲ್ಲೆಗೆ ಪೂರೈಸಲಿ ಎಂದು ತಿಳಿಸಿದರು.  ನಾಲೆಯ ಹೂಳು ಎತ್ತಲು ಸಾಧ್ಯವಾಗುತ್ತಿಲ್ಲ. ಗಿಡ ಬೆಳೆದುಕೊಂಡು ನೀರು ಮುಂದಕ್ಕೆ ಹರಿಯುತ್ತಿಲ್ಲ. ನಾಲೆಯ ಕೊನೆಯ ಭಾಗದವರೆಗೂ ನೀರು ಹರಿಸಬೇಕು. ಈ ಕುರಿತು ವಿಧಾನ ಮಂಡಲದ ಅಧಿವೇಶನದಲ್ಲಿ ಮಾತನಾಡುವವರು ಯಾರೂ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಒಕ್ಕೂಟದ ಉಪಾಧ್ಯಕ್ಷ ನಾಗರಾಜರಾವ್ ಕೊಂಡಜ್ಜಿ, ಪ್ರಧಾನ ಕಾರ್ಯದರ್ಶಿ ಎ.ಎಂ. ಮಂಜುನಾಥ್, ಬಿ.ಕೆ. ವಿಶ್ವನಾಥ್ ಇದ್ದರು.