ಜಿಲ್ಲೆ

2025ಕ್ಕೆ ಪೂರ್ಣಗೊಳ್ಳಲಿದೆ ಭದ್ರಾ ಮೇಲ್ದಂಡೆ ಯೋಜನೆ

ರಮೇಶ ಜಹಗೀರದಾರ್

ಜಗಳೂರು : ತಾಲೂಕಿನ ಕನಸಿನ ಕೂಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ 2025ರ ಗಾಂಧಿ ಜಯಂತಿಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.  ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಇದರ ಅನುಷ್ಠ್ಠಾನದ ವತಿಯಿಂದ  ಹಮ್ಮಿಕೊಂಡಿದ್ದ ಜಗಳೂರು ತಾಲೂಕು  ಅರಭಾವಿ-ಚಳ್ಳಕೆರೆ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.  ಇತ್ತೀಚಿನ ದಿನಗಳಲ್ಲಿ ರಸ್ತೆಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಇದೊಂದು ರಾಜ್ಯ ಹೆದ್ದಾರಿಯಾಗಿದ್ದು, ಉತ್ತಮವಾದ ರಸ್ತೆ ನಿರ್ಮಿಸಿ ಮಾದರಿಯಾಗಬೇಕು. ಮಳೆಗಾಲ ಆರಂಭದ ಮುನ್ನವೇ ಪೂರ್ಣಗೊಳಿಸಬೇಕು. ರಸ್ತೆ ಕಳಪೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು.  ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ ಮಾತನಾಡಿ, ರಾಜ್ಯ ಹೆದ್ದಾರಿ ಜಗಳೂರು-ದೊಣೆಹಳ್ಳಿ ರಸ್ತೆ ಹದಗೆಟ್ಟು ನಾಲ್ಕೈದು ವರ್ಷಗಳಾಗಿವೆ. ಆದರೆ ಹಿಂದಿನ ಶಾಸಕರು ಇದಕ್ಕೆ ಗಮನಹರಿಸಲಿಲ್ಲ. ಇದೀಗ ದೇವೇಂದ್ರಪ್ಪ ಅವರು ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.  ರಾಷ್ಟ್ರೀಯ ಹೆದ್ದಾರಿ 50ರ ದೊಣೆಹಳ್ಳಿ ಕ್ರಾಸ್‌ಬಳಿ ಬೀದಿ ದೀಪಗಳಿಲ್ಲದೇ ರಾತ್ರಿ ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಳ್ಳತನವಾಗುತ್ತಿದೆ. ತಕ್ಷಣವೇ ವಿದ್ಯುತ್ ವ್ಯವಸ್ಥೆ ಮಾಡಬೇಕು. ಪೊಲೀಸ್ ಉಪ ಠಾಣೆ ಬೇಕಾಗಿದೆ ಎಂದು ಮನವಿ ಮಾಡಿದರು.  ಕೆಪಿಸಿಸಿ ಮುಖಂಡ ಕೆ.ಪಿ. ಪಾಲಯ್ಯ ಮಾತನಾಡಿ, ವಿಪಕ್ಷದವರು ಸರ್ಕಾರದಲ್ಲಿ ಹಣವಿಲ್ಲ. ಎಲ್ಲವನ್ನೂ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನವಿದೆ ಎಂದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್,  ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ರಾಮಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲ್ಪನಾ, ಪಲ್ಲಾಗಟ್ಟೆ ಶೇಖರಪ್ಪ ಸೇರಿ ಮತ್ತಿತರರಿದ್ದರು.