ದಾವಣಗೆರೆ : ರೈತರು ಮತ್ತು ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಕೆಲವು ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ, ಲೀಡ್ ಬ್ಯಾಂಕ್‌ನ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲು ಅಲೆದಾಡಿಸುವುದು ಕಂಡುಬಂದಿದೆ. ಸರ್ಕಾರದ ಯೋಜನೆಗಳ ಪ್ರಯೋಜನ ಅವರಿಗೆ ಸಿಗಬೇಕಾದರೆ ಬ್ಯಾಂಕರ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಸಿಬಿಲ್ ಸ್ಕೋರ್ ಪರಿಗಣಿಸಿ ಸಾಲ ಮಂಜೂರಾತಿ ನೀಡಲಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದೇಶ್ವರ, ಕೋಟ್ಯಂತರ ರೂ. ಸಾಲ ಮಾಡುವ ಉದ್ಯಮಿಗಳಿಗೆ ಸಿಬಿಲ್ ಸ್ಕೋರ್ ಪರಿಗಣನೆ ಮಾಡಿ. ಅಲ್ಪ ಮೊತ್ತದ ಸಾಲ ಪಡೆಯುವ ರೈತರು, ವಿದ್ಯಾರ್ಥಿಗಳಿಗೆ ಆ ನಿಯಮ ಅನ್ವಯಿಸುವುದು ಬೇಡ ಎಂದರು.
ಈ ಕುರಿತು ರಾಜ್ಯಮಟ್ಟದ ಸಮಿತಿಗೆ ಶಿಫಾರಸು ಮಾಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿ.ಪಂ. ಸಿಇಒ ಸುರೇಶ ಬಿ. ಇಟ್ನಾಳ್ ತಿಳಿಸಿದರು.
ಕೇಂದ್ರದ ಯೋಜನೆಗಳ ಫಲಾನುಭವಿಗಳು ಅರ್ಜಿ ಸಲ್ಲಿಸಿದಾಗ ಕೆಲವು ಬ್ಯಾಂಕಿನವರು ಅವುಗಳನ್ನು 2 ರಿಂದ 3 ತಿಂಗಳು ಹಾಗೇ ಇಟ್ಟುಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ಇದರಿಂದ ಅನಗತ್ಯ ವಿಳಂಬವಾಗುತ್ತಿದ್ದು ಅಭ್ಯರ್ಥಿಗಳಿಗೂ ಬೇಸರವಾಗುತ್ತಿದೆ. ಅದಕ್ಕೆ ಅವಕಾಶವಾಗದಂತೆ 15 ದಿನಗಳ ಒಳಗಾಗಿ ವಿಲೇವಾರಿಗೊಳಿಸಬೇಕು ಎಂದು ತಾಕೀತು ಮಾಡಿದರು.
ಸಾಲ ಮರುಪಾವತಿ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಸಾಲ ಮರುಪಾವತಿ ಸರಿಯಾಗಿ ಮಾಡುತ್ತಿದ್ದಾರೆ, ಆದರೆ ಶೈಕ್ಷಣಿಕ ಸಾಲ ಮರುಪಾವತಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು. ಮುದ್ರಾ ಯೋಜನೆಯ ಫಲಾನುಭವಿಗಳ ಮರುಪಾವತಿ ಬಾಕಿ ಬಹಳಷ್ಟಿದೆ ಎಂಬುದನ್ನು ಸಭೆಯ ಗಮನಕ್ಕೆ ತರಲಾಯಿತು.
ಮುದ್ರಾ ಯೋಜನೆಯಡಿ ಸಾಲ ಪಡೆದವರು ಯಾವ ವೃತ್ತಿ ಮಾಡುತ್ತಿದ್ದಾರೆ, ಏಕೆ ಮರುಪಾವತಿ ಮಾಡುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳುವಂತೆ ಸಿದ್ದೇಶ್ವರ ಸೂಚಿಸಿದರು.
ಪಿಎಂಇಜಿಪಿ, ಉದ್ಯೋಗಿನಿ, ಕೈಮಗ್ಗ ಅಭಿವೃದ್ಧಿ ಸೇರಿ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಆಹಾರ ಸಂಸ್ಕರಣೆ ಘಟಕಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವಂತೆ ತಿಳಿಸಿದರು. ಕೇಂದ್ರದ ವಿಮಾ ಯೋಜನೆಗಳ ಲಾಭ ಜಿಲ್ಲೆಯಲ್ಲಿ ಎಷ್ಟು ಜನರಿಗೆ ದೊರಕಿದೆ ಎಂದು ಮಾಹಿತಿ ನೀಡುವಂತೆ ಸೂಚಿಸಿದರು.
ಬ್ಯಾಂಕುಗಳ ಸಾಧನೆಯ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಕೆಲವು ಬ್ಯಾಂಕ್ ಅಧಿಕಾರಿಗಳು ಸಭೆಗೇ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಿಯಾಗಿ ಸ್ಪಂದಿಸದ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದರು. ಕೆಲಸ ಮಾಡಲು ಇಷ್ಟವಿದ್ದರೆ ಮಾಡಿ, ಇಲ್ಲದಿದ್ದರೆ ಬೇರೆ ಕಡೆಗೆ ಹೋಗಿ ಎಂದು ತಿಳಿಸಿದರು.
ಹವಾಮಾನ ಆಧರಿತ ವಿಮಾ ಯೋಜನೆಗೆ ಹೆಸರು ನೋಂದಾಯಿಸಲು ಜುಲೈ 15 ಕೊನೆಯ ದಿನವಾಗಿದೆ. ಹೆಚ್ಚು ರೈತರು ನೋಂದಣಿ ಮಾಡಿಸುವಂತೆ ಮಾಡಲು ಎಲ್ಲರ ಸಹಕಾರ ಬೇಕಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಜನರಿಗೆ ನೆರವಾಗುವ ಮೂಲಕ ಪುಣ್ಯ ಸಂಪಾದನೆ ಮಾಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಆರ್‌ಬಿಐ ಎಜಿಎಂ ಪಾಠಕ್ ಮಾತನಾಡಿ, ವಾರ್ಷಿಕ ಸಾಲ ಯೋಜನೆ ಸಿದ್ಧಪಡಿಸಲು ಬ್ಯಾಂಕ್ ಶಾಖೆಗಳು ಕೈಜೋಡಿಸಬೇಕು ಎಂದರು. ನಬಾರ್ಡ್ ಅಧಿಕಾರಿ ರಶ್ಮಿ ರೇಖಾ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಕೆ.ವಿ. ಶ್ರೀನಿವಾಸ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಜಿ.ಸಿ. ಪ್ರಕಾಶ್ ಮಾತನಾಡಿದರು.