ಜಿಲ್ಲೆ

ಕೊನೆಗೂ ವಾರಸುದಾರರ ಕೈಸೇರಿದ ಆಭರಣಗಳು

ರಮೇಶ ಜಹಗೀರದಾರ್

ನ್ಯಾಮತಿ : ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ನ್ಯಾಮತಿಯ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ದರೋಡೆ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. 509 ಗ್ರಾಹಕರ 17 ಕೆಜಿ 705 ಗ್ರಾಂ ತೂಕದ, 12.95 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳರ ಪಾಲಾಗಿತ್ತು. 6 ತಿಂಗಳ ಹಿಂದೆ ಭೇದಿಸಲಾಗಿದ್ದ ಈ ಕೇಸ್‌ಗೆ ಸಂಬಂಧಿಸಿದ ಚಿನ್ನಾಭರಣಗಳನ್ನು ಪೊಲೀಸರು ಶುಕ್ರವಾರ ವಾರಸುದಾರರಿಗೆ ಹಸ್ತಾಂತರಿಸಿದರು.  ತಾಲೂಕಿನ ಸುರಹೊನ್ನೆ ಬನಶಂಕರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅಮೂಲ್ಯ ಆಭರಣಗಳನ್ನು ಕಳೆದುಕೊಂಡು ಆತಂಕದಲ್ಲಿದ್ದ ವಾರಸುದಾರರು ಕೊನೆಗೂ ತಮ್ಮ ಸ್ವತ್ತುಗಳನ್ನು ವಾಪಸ್ ಪಡೆದು ಸಮಾಧಾನದ ನಿಟ್ಟುಸಿರು ಬಿಟ್ಟರು.  ಪ್ರಕರಣ ಪತ್ತೆಯ ನಂತರ ಗ್ರಾಹಕರು ತಮ್ಮ ಆಭರಣ ವಾಪಸ್ ನೀಡುವಂತೆ ಬ್ಯಾಂಕ್ ಮುಖ್ಯಸ್ಥರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಹಲವು ಬಾರಿ ಸಭೆ ನಡೆಸಲಾಗಿತ್ತು. ಕೊನೆಗೂ ಗ್ರಾಹಕರ ಆಸೆ ಕೈಗೂಡಿತು. ದಾಖಲೆಗಳ ಆಧಾರದಲ್ಲಿ ಬ್ಯಾಂಕ್ ನಿಯಮದಂತೆ ಆಭರಣಗಳನ್ನು ಹಸ್ತಾಂತರಿಸಲಾಯಿತು.  ಶಾಸಕ ಡಿ.ಜಿ. ಶಾಂತನಗೌಡ, ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್‌ಪಿ ಸ್ಯಾಮ್ ವರ್ಗಿಸ್, ನ್ಯಾಮತಿ ಪಿಐ ಎನ್.ಎಸ್. ರವಿ,  ಎಸ್‌ಬಿಐ ರೀಜನಲ್ ಮ್ಯಾನೇಜರ್ ಮಾಧವ ಕುಮಾರ್, ಚೀಫ್ ಮ್ಯಾನೇಜರ್ ಸುರೇಶ್, ಮ್ಯಾನೇಜರ್ ಅಮಿತ್ ಕುಮಾರ್, ಅಧಿಕಾರಿಗಳಾದ ಪ್ರಭಾಕರ್, ವಿಕಾಸ್, ಸುನೀಲ್ ಕುಮಾರ್ ಯಾದವ್ ಇದ್ದರು.