ದಾವಣಗೆರೆ : ಪೇಮೆಂಟ್ ಕೋಟಾ ರದ್ದುಗೊಳಿಸಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜನ್ನು ಬಡ ವಿದ್ಯಾರ್ಥಿಗಳಿಗೆ ಉಳಿಸಲು ಆಗ್ರಹಿಸಿ ಎಐಡಿಎಸ್‌ಒ ವತಿಯಿಂದ ಅ. 16 ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಾಗಿರುವ ಯುಬಿಡಿಟಿ 7 ದಶಕಗಳಿಂದ ಬಡ ರೈತ, ಕಾರ್ಮಿಕರ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಇಂಜಿನಿಯರಿಂಗ್ ಶಿಕ್ಷಣ ಒದಗಿಸುತ್ತ ಬಂದಿದೆ. ಈ ಕಾಲೇಜಿನಲ್ಲಿ ಈಗ ಮೊದಲ ವರ್ಷಕ್ಕೆ 504 ಸೀಟುಗಳಿದ್ದು ಅವುಗಳಲ್ಲಿ 254 ಸೀಟುಗಳನ್ನು 97 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು. ಉಳಿದ 250 ಮೆರಿಟ್ ಸೀಟುಗಳಿಗೆ ನಿಗದಿಪಡಿಸಿರುವ 43 ಸಾವಿರ ರೂ. ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಹೀಗಿರುವಾಗ ಶುಲ್ಕ ಕಡಿಮೆ ಮಾಡಿ ಬಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಪ್ರವೇಶಿಸಲು ಅವಕಾಶ ಕಲ್ಪಿಸುವುದನ್ನು ಬಿಟ್ಟು ಅರ್ಧದಷ್ಟು ಸೀಟುಗಳನ್ನು ಪೇಮೆಂಟ್ ಕೋಟಾದಡಿ ತಂದಿರುವುದು ದುರಂತ ಎಂದರು. ಪೇಮೆಂಟ್ ಕೋಟಾ ರದ್ದುಗೊಳಿಸಬೇಕು, ಕಾಲೇಜು ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು. ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಒಂದು ತಿಂಗಳಿಂದ ಹೋರಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದರು. ಹೋರಾಟದ ಮುಂದಿನ ಹೆಜ್ಜೆಯಾಗಿ ದಾವಣಗೆರೆ ಬಂದ್‌ಗೆ ಕರೆ ಕೊಡಲಾಗಿದೆ. ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಬಂದ್ ನಡೆಯಲಿದೆ. ಆಟೋ ಚಾಲಕರು, ಬೀದಿ ಬದಿ ಹಾಗೂ ಅಂಗಡಿ ವ್ಯಾಪಾರಸ್ಥರು, ಮಳಿಗೆಯವರು, ವಾಹನ ಚಾಲಕರು, ಸಾಮಾನ್ಯ ಜನರು ಸೇರಿದಂತೆ ದಾವಣಗೆರೆ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕಾರ್ಯದರ್ಶಿ ಟಿ.ಎಸ್. ಸುಮನ್, ಅಖಿಲೇಶ್, ಅಭಿಷೇಕ್, ರೋಹಿತ್, ಜೀವನ್ ಇದ್ದರು.