ದಾವಣಗೆರೆ : ನಗರದ ಎಂ.ಸಿ.ಸಿ.‘ಎ’ ಬ್ಲಾಕ್‌ನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ಧರಿಸುತ್ತಿದ್ದ ಪಾದುಕೆಗಳ ದರ್ಶನಕ್ಕೆ ಏ. 14 ಮತ್ತು 15ರಂದು ವ್ಯವಸ್ಥೆ ಮಾಡಲಾಗಿದೆ ಎಂದು ಶಿರಡಿ ಶ್ರೀ ಸಾಯಿಬಾಬಾ ಮಂದಿರದ ಪಾದುಕಾ ಸೇವಾ ಸಮಿತಿಯ ಸಂಚಾಲಕ ವಾಸುದೇವ ರಾಯ್ಕರ್ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಯಿಬಾಬಾ ಮಂದಿರಕ್ಕೆ ಏ. 13ರ ಸಂಜೆ 6.30ಕ್ಕೆ ಸುವರ್ಣ ರಥದಲ್ಲಿ ಸಾಯಿಬಾಬಾ ಅವರ ಮೂರ್ತಿ ಹಾಗೂ ಪಾದುಕೆಗಳು ನಗರದ ಜಯದೇವ ವೃತ್ತಕ್ಕೆ ಆಗಮಿಸಲಿವೆ. ಅಲ್ಲಿಂದ ಸಾಯಿಬಾಬಾ ಮಂದಿರದ ವರೆಗೂ ಬೃಹತ್ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು. ಏ. 14ರ ಹಾಗೂ 15ರಂದು ಬೆಳಗ್ಗೆ 8ರಿಂದ ರಾತ್ರಿ 10 ಗಂಟೆಯ ವರೆಗೂ ಪಾದುಕೆಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 6.30ಕ್ಕೆ ಆರತಿ ನೆರವೇರಲಿದೆ. ಎರಡೂ ದಿನವೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಸಮಿತಿಯ ಡಾ.ಎಚ್.ಎಸ್. ಜಾಧವ್, ಪರಶುರಾಮ, ಜಿತೇಂದ್ರ, ಮಧುಸೂದನ್, ರಾಜಶೇಖರ್, ಶ್ರೀನಿವಾಸ್, ತಿಪ್ಪೇಸ್ವಾಮಿ, ನಟರಾಜ್ ಸುದ್ದಿಗೋಷ್ಠಿಯಲ್ಲಿದ್ದರು.