ದಾವಣಗೆರೆ : ಆಯುರ್ವೇದ ಚಿಕಿತ್ಸಾ ಪದ್ಧತಿ ಅಳವಡಿಕೆಯಿಂದ ದೀರ್ಘಾಯುಷ್ಯ ಸಾಧ್ಯ ಎಂದು ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಸದ್ಯೋಜಾತ ಸ್ವಾಮೀಜಿ ಹಿರೇಮಠದಲ್ಲಿ ಮಂಗಳವಾರ ಧನ್ವಂತರಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಆಯುರ್ವೇದ ಪದ್ಧತಿ ಅನುಸರಿದ ಹಿನ್ನೆಲೆಯಲ್ಲಿ ನಮ್ಮ ಪೂರ್ವಜರು ಶತಾಯುಷಿಗಳಾಗಿ ಬದುಕಿದ್ದರು. ಆದರೆ, ಹಿತ್ತಲಗಿಡ ಮದ್ದಲ್ಲ ಎಂಬ ಉದಾಸೀನತೆ ತೋರುವುದು ಸರಿಯಲ್ಲ. ಇಂದಿನ ಪೀಳಿಗೆ ನೂರು ವರ್ಷ ಬದುಕಲು ಇದನ್ನು ಬಳಸಬೇಕು ಎಂದು ತಿಳಿಸಿದರು. ನಾಲ್ಕು ವೇದಗಳ ಜತೆಗೆ ಪಂಚಮ ವೇದವಾಗಿ ಆಯುರ್ವೇದ ಜ್ಞಾನ ಸೇರಿಸಬಹುದಾಗಿದೆ. ಇದಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿ ಮನೆ ಮನೆಗೆ ಆಯುರ್ವೇದ ಕೊಂಡೊಯ್ಯುವ ಕೆಲಸ ಆಗಬೇಕು. ಮನೆಯಲ್ಲಿರುವ ಆಹಾರ ಪದಾರ್ಥ ಬಳಸಿಕೊಂಡು ನಿರೋಗಿಗಳಾಗಬಹುದು ಎಂದರು. ಜಿಲ್ಲಾ ಆಯುಞ ಅಧಿಕಾರಿ ಡಾ. ಬಿ.ಯು. ಯೋಗೇಂದ್ರಕುಮಾರ್ ಪ್ರಾಸ್ತಾವಿಕ ಮಾತನಾಡಿ, ಜಗತ್ತಿನ 155 ದೇಶಗಳಲ್ಲಿ ಆಯುರ್ವೇದ ದಿನ ಆಚರಿಸಲಾಗುತ್ತಿದೆ. ಬರುವ ವರ್ಷ ಅಂತರಾಷ್ಟ್ರೀಯ ದಿನಾಚರಣೆ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಿದರು. ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದದ ಆವಿಷ್ಕಾರಗಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ಈ ವರ್ಷದ ಘೋಷ ವಾಕ್ಯವಾಗಿದ್ದು, ಈ ನಿಟ್ಟಿನಲ್ಲಿ ಅ.21ರಿಂದ 4 ದಿನಗಳ ಕಾಲ ಜಿಲ್ಲೆಯ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳಾ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು. ಆಯುಷ್ ಮಂತ್ರಾಲಯವು 2016ನೇ ಇಸವಿಯಿಂದ ರಾಷ್ಟ್ರೀಯ ಆಯುರ್ವೇದ ದಿನ ಘೋಷಿಸಿ ಲಾಂಛನ ಬಿಡುಗಡೆಗೊಳಿಸಿದೆ. ಇದರ ಮಧ್ಯಭಾಗದಲ್ಲಿ ಭಗವಾನ್ ಧನ್ವಂತರಿಯ ನೆರಳುಗೆರೆ ಚಿತ್ರವಿದೆ, ಐದು ಎಲೆಗಳು ಪಂಚಮಹಾಭೂತ ಹಾಗೂ ಅವುಗಳ ಕೆಳಗಿರುವ ಮೂರು ವೃತ್ತಗಳು ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫವನ್ನು ಪ್ರತಿನಿಧಿಸುತ್ತವೆ. ಇವೆಲ್ಲವನ್ನು ಸುತ್ತಿರುವ ಅಂಡಾಕಾರದ ಎಲೆಯು ಆಯುರ್ವೇದ ಈ ಮೂಲತತ್ವ ಆಧರಿಸಿದ ಸಂಪೂರ್ಣ ಪ್ರಕೃತಿದತ್ತ ಚಿಕಿತ್ಸೆಯಾಗಿದೆ ಹಾಗೂ ಅಮೃತಸಮಾನವಾದುದೆಂದು ವಿವರಿಸುತ್ತದೆ ಎಂದು ತಿಳಿಸಿದರು. ನಿವೃತ್ತ ಆಯುಷ್ ಅಧಿಕಾರಿ ಡಾ. ಉಜ್ಜಪ್ಪ ಎಸ್. ಮಾಳಾಪುರ, ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಜ್ಞಾನೇಶ್ವರ, ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಅಶ್ವಿನಿ, ಪ್ರಾಚಾರ್ಯ ಡಾ.ಅಕ್ಬರ್‌ಖಾನ್, ಪತಂಜಲಿ ಆಯುರ್ವೇದ ಸಮಿತಿ ಮುಖ್ಯಸ್ಥ ಷಣ್ಮುಖಪ್ಪ ಇತರರು ಇದ್ದರು. ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ---- ಚಿತ್ರ : ಡಿವಿಜಿ ಆಯುರ್ವೇದ ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಬಸವಪ್ರಭು ಸ್ವಾಮೀಜಿ, ಡಾ.ಬಿ.ಯು.ಯೋಗೇಂದ್ರಕುಮಾರ್, ಡಾ.ಉಜ್ಜಪ್ಪ ಎಸ್.ಮಾಳಾಪುರ, ಡಾ.ಜ್ಞಾನೇಶ್ವರ, ಡಾ.ಅಶ್ವಿನಿ ಇತರರು ಇದ್ದರು. .............. ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿಕೆ ಧನ್ವಂತರಿ ಜಯಂತ್ಯುತ್ಸವ ಸವಾಲಿನ ಕಾಯಿಲೆ ಗುಣಪಡಿಸುವ ಶಕ್ತಿ ಆಯುರ್ವೇದಕ್ಕಿದೆ ದಾವಣಗೆರೆ: ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಅನೇಕ ಕಾಯಿಲೆ ಗುಣಪಡಿಸುವ ಶಕ್ತಿ ಆಯುರ್ವೇದಕ್ಕಿದೆ ಎಂದು ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು. ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಸಾವಿರಾರು ವರ್ಷಗಳಿಂದ ಜನರ ಮನಸ್ಸಿನಲ್ಲಿ ಬೇರೂರಿದೆ. ನಾಟಿ ವೈದ್ಯರು ಹಣದ ಆಸೆಗೆ ಮಾರುಹೋಗದೆ ಹಳ್ಳಿಯ ಜನರು ಮತ್ತು ರೈತಾಪಿ ವರ್ಗದವರ ಆರೋಗ್ಯ ಕಾಪಾಡಬೇಕು ಎಂದು ತಿಳಿಸಿದರು. ಭೂಮಿಯ ಮೇಲೆ ಅನೇಕ ಔಷಧಿ ಸಸ್ಯಗಳಿದ್ದು, ಪಾರಂಪರಿಕ ವೈದ್ಯರು ಅವುಗಳನ್ನು ಸಂಗ್ರಹಿಸಿ ರೋಗಿಗಳಿಗೆ ಮದ್ದು ನೀಡುವ ಮೂಲಕ ಸೇವೆ ಮಾಡುವ ಜತೆಗೆ ಪಾರಂಪರಿಕ ವೈದ್ಯ ಪರಂಪರೆ ಬೆಳೆಸಬೇಕು. ಈ ನಿಟ್ಟಿನಲ್ಲಿ ನಾಟಿ ಪಂಡಿತರು ಜನರ ನಂಬಿಕೆ ಗಳಿಸಬೇಕಿದೆ ಎಂದರು. ಆಯುರ್ವೇದಲ್ಲಿ ಮನೋರೋಗಕ್ಕೂ ಚಿಕಿತ್ಸೆ ಇರುವುದನ್ನು ಋಷಿ ಮುನಿಗಳು ಅಂದೇ ಕಂಡು ಹಿಡಿದಿದ್ದಾರೆ. ಈ ಪದ್ಧತಿ ಅನುಸರಿಸಿ ಒಬ್ಬ ಮನೋರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದೇನೆ ಎಂದು ತಿಳಿಸಿದರು. ದೀಪಾವಳಿ ಹಬ್ಬದಲ್ಲಿ ಬಳಸುವ ಮಹಾಲಿಂಗ ಬಳ್ಳಿ, ಹೊನ್ನಾರಿಕೆ ಹೂವು ಸೇರಿ ಕೆಲವು ಗಿಡ ಮೂಲಿಕೆಗಳ ಬಗೆಗೆ ಮಾಹಿತಿ ನೀಡಿದರು. ಆಹಾರ ಕ್ರಮದಲ್ಲಿ ಹೆಚ್ಚಾಗಿ ಮಜ್ಜಿಗೆ ಸೇವಿಸುವಂತೆ ಸಲಹೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಪ್ರಾಚೀನ ಕಾಲದಲ್ಲಿ ಅನೇಕ ರೋಗಗಳಿಗೆ ನಾಟಿ ಪಂಡಿತರೇ ಚಿಕಿತ್ಸೆ ನೀಡಿ ಕಾಯಿಲೆ ಶಮನಗೊಳಿಸುತ್ತಿದ್ದರು ಪಾರಂಪರಿಕ ಜ್ಞಾನವನ್ನು ಎಲ್ಲರೂ ಬೆಳೆಸಬೇಕಿದೆ ಎಂದು ಹೇಳಿದರು. ಪರಿಷತ್‌ನ ನಿಕಟಪೂರ್ವ ಜಿಲ್ಲಾಧ್ಯಕ್ಷ ನೇರ್ಲಿಗಿ ಗುರುಸಿದ್ದಪ್ಪ ಪ್ರಾಸ್ತಾವಿಕ ಮಾತನಾಡಿ, ಮೂತ್ರಕೋಶದ ಕಲ್ಲು ನಿವಾರಣೆ ಮತ್ತು ಮೈಗ್ರೇನ್ ನಿವಾರಕ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಪರಿಷತ್ ತಾಲೂಕು ಅಧ್ಯಕ್ಷೆ ಶಿವಲಿಂಗಮ್ಮ, ಜಿಲ್ಲಾ ಸಂಚಾಲಕಿ ಪುಷ್ಪಲತಾ, ಶಿವಮೂರ್ತಿ, ಮಂಜುನಾಥ ದೊಡ್ಡಮನಿ ಇತರರು ಇದ್ದರು.