ಜಿಲ್ಲೆ

ಅಯೋಧ್ಯೆ ಕರೆಗೆ ಓಗೊಟ್ಟ ರಾಮಭಕ್ತರು

Davanagere

ದಾವಣಗೆರೆ: ಅಯೋಧ್ಯಾ ಹೋರಾಟದ ನೆನಪುಗಳು ದಾವಣಗೆರೆಯೊಂದಿಗೆ ಬೆಸೆದಿವೆ. 1992ರಲ್ಲಿ ಜಿಲ್ಲೆಯಿಂದ ರಾಮ ಭಕ್ತರ ದೊಡ್ಡ ಪಡೆಯೇ ಅಯೋಧ್ಯೆಗೆ ತೆರಳಿತ್ತು. ಆ ಕರಸೇವಕರ ಅನುಭವಗಳು ರೋಚಕವಾಗಿವೆ.

ರಾಮ ಜನ್ಮಭೂಮಿಯತ್ತ ತೆರಳುವಂತೆ ಕರೆ ಬಂದಿದ್ದೇ ತಡ, ನೂರಾರು ಉತ್ಸಾಹಿ ಯುವಕರು ಉಟ್ಟ ಬಟ್ಟೆಯಲ್ಲೇ ಹೊರಟರು. ಅವರ ಪೈಕಿ ಆಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ.ಸಿ. ಮಹಾಬಲೇಶ್ವರ್ ಅವರೂ ಒಬ್ಬರು.

ಆಗ ನಾನು ರಾಮಜ್ಯೋತಿ ರಥಯಾತ್ರೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿದ್ದೆ. ಅಯೋಧ್ಯೆಗೆ ಹೊರಡುವಂತೆ ಕರೆ ಬಂದಿದ್ದೇ ತಡ, ದಾವಣಗೆರೆಗೆ ವಾಪಸಾದೆ. 1992ರ ನ. 30ರಂದು ಜಿಲ್ಲೆಯಿಂದ 182 ಜನ ರೈಲು ಹತ್ತಿದೆವು. ಡಾ.ಎ.ಎಚ್. ಶಿವಯೋಗಿಸ್ವಾಮಿ ಅವರೂ ಅದೇ ತಂಡದಲ್ಲಿದ್ದರು.

ನಾವು ಝಾನ್ಸಿಗೆ ಡಿ. 1ರಂದು ತಲುಪಿದಾಗ ಉತ್ತರಪ್ರದೇಶದ ಕೃಷಿ ಸಚಿವರಾಗಿದ್ದ ರವೀಂದ್ರ ಶುಕ್ಲಾ ಬಂದು ನಮ್ಮನ್ನು ಒಂದು ಕಾಲೇಜಿಗೆ ಕರೆದುಕೊಂಡು ಹೋದರು. ಕರಸೇವೆಗೆ ಈಗ ಹೋಗುವುದು ಬೇಡ, ಡಿ. 6ರ ವರೆಗೆ ಇಲ್ಲೇ ಇರಿ ಎಂದು ಹೇಳಿದರು. ಆದರೆ ನಮ್ಮ ಮನಸ್ಸು ತಡೆಯಲಿಲ್ಲ, ಪ್ರಯಾಣ ಮುಂದುವರಿಸಿದೆವು.

ನಾವು ಲಕ್ನೋ ತಲುಪಿದಾಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ದೊಡ್ಡ ರ‌್ಯಾಲಿ ನಡೆದಿತ್ತು. ಹಿರಿಯ ನಾಯಕರು ಭಾಗವಹಿಸಿದ್ದರು. ಅದರಲ್ಲಿ ಪಾಲ್ಗೊಂಡೆವು. ಅಲ್ಲಿಂದ ಅಯೋಧ್ಯೆಗೆ ಹೋಗಲು ಎಲ್ಲ ರೈಲುಗಳೂ ಭರ್ತಿಯಾಗಿದ್ದವು. 2 ಬಸ್‌ಗಳಲ್ಲಿ ತೆರಳಿದೆವು.

ನಾವು ಅಯೋಧ್ಯೆ ತಲುಪಿದಾಗ ಅಲ್ಲಿ ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದರು. ನಾವು ತಂಗಿದ್ದ ತುಂಗಭದ್ರಾ ನಗರ ರಾಮ ಮಂದಿರಕ್ಕೆ ಹತ್ತಿರದಲ್ಲೇ ಇತ್ತು.

ಲಕ್ಷಾಂತರ ಸಾಧು, ಸಂತರು ಸೇರಿದ್ದರು. ಆ ದೃಶ್ಯವೇ ರೋಮಾಂಚನಕಾರಿಯಾಗಿತ್ತು. ವೇದಿಕೆಯಲ್ಲಿ ಭಜನೆ, ಹರಿಕಥೆ, ಸಂಗೀತ, ಭಾಷಣ ನಿರಂತರವಾಗಿದ್ದವು. ಸಂಜೆಯ ಮೆರವಣಿಗೆಯಲ್ಲಿ ಭಾಗಿಯಾದೆವು. ಹೆಜ್ಜೆ ಹೆಜ್ಜೆಗೆ ಸೈನಿಕರು, ಪೊಲೀಸರಿದ್ದರು. ಎಲ್ಲೆಲ್ಲೂ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿತ್ತು. ರಾಮಮಂದಿರ ಮುಂಭಾಗದಲ್ಲಿದ್ದ ಮುಳ್ಳಿನ ತಂತಿಯನ್ನು ಕರಸೇವಕರು ಕಿತ್ತು ಹಾಕಿದರು.

ಡಿ. 6ರಂದು ಅಲ್ಲಿ ನಡೆದ ಘಟನೆಗೆ ಸಾಕ್ಷಿಯಾದೆವು. ಎಲ್ಲಿಂದ ಬಂದರೋ ಜನ ಆ ಕಟ್ಟಡದ ಮೇಲೆ ಹತ್ತಿದರು. 120 ಅಡಿ ಎತ್ತರದ ಕಟ್ಟಡ ಏರಿದರು. ಒಂದೊಂದು ಗುಂಬಜ್ ಬಿದ್ದಾಗಲೂ ಕೆಂಪು ಧೂಳು ಆವರಿಸಿಕೊಂಡಿತು. 3ನೇ ಗುಂಬಜ್ ಬೀಳುತ್ತಿದ್ದಂತೆ ಜೈಕಾರ ಮೊಳಗಿತು. ಜನರು ದೀಪ ಹಚ್ಚಿದರು, ಸಿಹಿ, ಬಾದಾಮಿ ಹಾಲು ಹಂಚಿದರು. ಇಡೀ ಅಯೋಧ್ಯೆ ಪ್ರಜ್ವಲಿಸಿತು. ರಾಮಭಕ್ತರ ಸಂಕಲ್ಪ ಈಡೇರಿತ್ತು.

ಕಟ್ಟಡದ ಮೇಲೇರಿದ್ದ ಮಹಾಬಲೇಶ್ವರ್ ಅವರಿಗೆ ಕೈಗೆ ಗಾಯವಾಗಿ ನಂತರ ಚಿಕಿತ್ಸೆ ಪಡೆದುಕೊಂಡರಂತೆ. ಅಯೋಧ್ಯೆಯಿಂದ ಪಂಚಲೋಹದ ತ್ರಿಶೂಲ, ಇಟ್ಟಿಗೆ ತಂದಿದ್ದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡರು.
ಅಯೋಧ್ಯೆಯಿಂದ ವಾಪಸ್ ಬರುವುದು ಸುಲಭದ ಪ್ರಯಾಣ ಆಗಿರಲಿಲ್ಲ. 2 ದಿನ ಊಟವಿರಲಿಲ್ಲ. ನಮ್ಮ ರೈಲಿಗೆ ಪೆಟ್ರೋಲ್ ಬಾಂಬ್ ಎಸೆಯುತ್ತಿದ್ದರು. ಹಾಗೂ ಹೀಗೂ ಮಾಡಿ ಬೆಂಗಳೂರಿನಲ್ಲಿ ಬಂದು ಇಳಿಯುತ್ತಿದ್ದಂತೆ ಉಪ್ಪಾರಪೇಟೆ ಠಾಣೆ ಪೊಲೀಸರು ಕರೆದೊಯ್ದರು. ಅಲ್ಲಿಂದ ಬಿಡುಗಡೆಯಾಗಿ ದಾವಣಗೆರೆಗೆ ಬಂದಾಗ ಇಲ್ಲಿಯೂ ಬಂಧಿಸಿ ನಂತರ ಬಿಡುಗಡೆ ಮಾಡಿದರು ಎಂದು ಮಹಾಬಲೇಶ್ವರ್ ತಿಳಿಸಿದರು.