ಜಿಲ್ಲೆ

ಕುಷ್ಠ, ಕ್ಷಯ ರೋಗದ ಬಗ್ಗೆ ಮೂಡಲಿ ಜಾಗೃತಿ

ದಾವಣಗೆರೆ :  ಕುಷ್ಠ ಹಾಗೂ ಕ್ಷಯ ರೋಗದ ಕುರಿತಂತೆ ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.  ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಕುಷ್ಠ ರೋಗ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.  ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಆಶಾ ಕಾರ್ಯಕರ್ತೆಯರು, ಸ್ಥಳೀಯ ವೈದ್ಯರು ಗ್ರಾಮದ ಮನೆ ಮನೆಗೂ ಭೇಟಿ ನೀಡಿ ಕುಷ್ಠ ರೋಗ ಪತ್ತೆ ಹಚ್ಚುವ ಬಗ್ಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ರೋಗದ ಆರಂಭಿಕ ಗುಣಲಕ್ಷಣಗಳನ್ನು ಖಚಿತಪಡಿಸಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಗೆ ತೆರಳಿ ಪರಿಶೀಲನೆ ಮಾಡಿ ಜಾಗೃತಿ ಮೂಡಿಸಬೇಕು ಎಂದರು.  ಜಿಲ್ಲೆಯ 32 ಗ್ರಾಮ ಪಂಚಾಯಿತಿಗಳು ಕ್ಷಯರೋಗ ಮುಕ್ತ ಪಂಚಾಯಿತಿಗಳಾಗಿವೆ. 2024 ರ ಸೆ. ತಿಂಗಳಲ್ಲಿ 49 ಕುಷ್ಠ ರೋಗಿಗಳು ಗುಣಮುಖರಾಗಿದ್ದು 29 ಹೊಸ ಪ್ರಕರಣ ದಾಖಲಾಗಿವೆ. ಕ್ಷಯರೋಗ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತಿಂಗಳಿಗೆ 500 ರೂ. ನೀಡಲಾಗುತ್ತಿದೆ. ನ. 1 ರಿಂದ ಈ ಮೊತ್ತವನ್ನು 1 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ನಿಕ್ಷಯ ಮಿತ್ರ ಯೋಜನೆ ಖಾಸಗಿ ವಲಯದಲ್ಲಿ ಪ್ರತಿ ರೋಗಿಗೆ 500 ರೂ. ಹಾಗೂ ಚಿಕಿತ್ಸೆ ಪೂರ್ಣಗೊಂಡ ನಂತರ 2 ವರ್ಷಗಳವರೆಗೆ ರೋಗಿಯ ನಿಗಾ ವಹಿಸಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.  ಇದೇ ವೇಳೆ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳುತ್ತಿರುವವರು ಟೆಲಿ ಮನಸ್‌ಗೆ 14416 ಗೆ ಕರೆ ಮಾಡಿ ಮುಕ್ತ ಸಮಾಲೋಚನೆ ಮಾಡಬಹುದು ಎಂಬ ಪೋಸ್ಟರ್ ಬಿಡುಗಡೆ ಮಾಡಲಾಯಿತು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮಖಪ್ಪ, ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಇದ್ದರು.