ಜಿಲ್ಲೆ

ಮಂಡಳಿ ಯೋಜನೆಗಳ ಸದುಪಯೋಗವಾಗಲಿ

ರಮೇಶ ಜಹಗೀರದಾರ್

ದಾವಣಗೆರೆ :  ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳನ್ನು ವಿಪ್ರ ಸಮಾಜದವರು ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚು ಸಂಖ್ಯೆಯ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು ಎಂದು ಮಂಡಳಿಯ ಜಿಲ್ಲಾ ಸಂಯೋಜನಾಧಿಕಾರಿ ಸಿದ್ದೇಶ್ ಮನವಿ ಮಾಡಿದರು.  ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ನಗರದ ಪಿಜೆ ಬಡಾವಣೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಮಂಡಳಿಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಿದರು.  ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ 2025-26 ನೇ ಸಾಲಿನಿಂದ ವಿಪ್ರ ಸ್ವ ಉದ್ಯಮ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್, ಟ್ಯಾಕ್ಸಿ ಮುಂತಾದ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಬಹುದು. 1 ಲಕ್ಷದಿಂದ 2 ಲಕ್ಷದ ವರೆಗೆ ಸಾಲ ನೀಡಲಾಗುವುದು. ಅದಕ್ಕೆ ಸಬ್ಸಿಡಿಯೂ ಇರಲಿದೆ ಎಂದು ತಿಳಿಸಿದರು.  ಇದಕ್ಕಾಗಿ ಬ್ಯಾಂಕಿಗೆ ಅಲೆದಾಡಬೇಕಿಲ್ಲ. ಆಧಾರ್ ಕಾರ್ಡ್ ಇರಬೇಕು, ಅದಕ್ಕೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಬ್ಯಾಂಕ್ ಖಾತೆ ಸೀಡಿಂಗ್ ಆಗಿರಬೇಕು. ಇ.ಡಬ್ಲು.ಎಸ್. ಪ್ರಮಾಣಪತ್ರ ಕಡ್ಡಾಯವಾಗಿದೆ ಎಂದು ಹೇಳಿದರು.  ಜಿಲ್ಲೆಯಲ್ಲಿ ಇದುವರೆಗೆ 11 ಅರ್ಜಿಗಳು ಬಂದಿವೆ. ಕನಿಷ್ಠ 100 ಅರ್ಜಿಗಳಾದರೂ ಸಲ್ಲಿಕೆಯಾಗಬೇಕು. ಈ ಕುರಿತು ಜಿಲ್ಲಾಮಟ್ಟದಲ್ಲಿ ಸದ್ಯದಲ್ಲೇ ಗುರಿ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.  ಇದಲ್ಲದೇ ಸಾಂದೀಪನಿ ಶಿಷ್ಯವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಇನ್ನಿತರ ಯೋಜನೆಗಳಿವೆ. ಐಎಎಸ್, ಕೆಎಎಸ್‌ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಸಮಾಜದವರಿಗೆ 1 ಲಕ್ಷ ರೂ. ವರೆಗೆ ಆರ್ಥಿಕ ನೆರವು ನೀಡುವ ಯೋಜನೆಗೆ ಮರುಚಾಲನೆ ನೀಡುವ ಚಿಂತನೆಯಿದೆ ಎಂದು ಹೇಳಿದರು.  ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಶ್ರೀನಿವಾಸ ಮೂರ್ತಿ ಮಾತನಾಡಿ, ಮಂಡಳಿಯು ವಿದ್ಯಾರ್ಥಿ, ವ್ಯಾಪಾರಸ್ಥರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಹೆಚ್ಚು ಅರ್ಜಿಗಳನ್ನು ಸಲ್ಲಿಸುವ ಮೂಲಕ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.  ಡಾ.ಸಿ.ಕೆ. ಆನಂದ ತೀರ್ಥಾಚಾರ್ ಸ್ವಾಗತಿಸಿದರು. ಗೋಪಾಲದಾಸ್ ನಿರೂಪಿಸಿದರು. ಚಿನ್ಮಯ ಭಟ್ ಪ್ರಾರ್ಥಿಸಿದರು. ಸತ್ಯನಾರಾಯಣ ರಾವ್, ಬಾಲಕೃಷ್ಣ ವೈದ್ಯ, ರಾಮಚಂದ್ರ ರಾವ್, ಎಂ.ಜಿ. ಶ್ರೀಕಾಂತ್ ಇತರರು ಪಾಲ್ಗೊಂಡಿದ್ದರು.