ಜಿಲ್ಲೆ

ಸಾಮಾಜಿಕ ಕಳಕಳಿ, ನಾಡು, ನುಡಿಗೆ ಗೌರವ ಇರಲಿ

ರಮೇಶ ಜಹಗೀರದಾರ್

ದಾವಣಗೆರೆ : ವಿದ್ಯಾರ್ಥಿಗಳು ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು. ನಾಡು, ನುಡಿಗೆ ಗೌರವ ಕೊಡಬೇಕು ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಹೇಳಿದರು.
 ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ನಗರದ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ, 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ‘ಶಾರದಾ ಪುರಸ್ಕಾರ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
 ಇತ್ತೀಚಿನ ದಿನಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಮುಂದಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಪುರಸ್ಕಾರ ನೀಡುವುದು ಸಾಧನೆಗೆ ಸ್ಫೂರ್ತಿಯಾಗುತ್ತದೆ. ಮಕ್ಕಳ ಸಾಧನೆ ಕಂಡು ಪಾಲಕರಿಗೂ ಸಂತೋಷವಾಗುತ್ತದೆ. ನಮ್ಮ ಕಾಲದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಮಕ್ಕಳು ಬೆಳೆಯುತ್ತ ದೊಡ್ಡ ಸಾಧನೆ ಮಾಡಲಿ ಎಂದು ಹಾರೈಸಿದರು.
 ಅರುಣಾಚಲ ಕುಟುಂಬದವರಿಗೆ ಸಮುದಾಯದ ಬಗ್ಗೆ ಇರುವ ಅಕ್ಕರೆಯನ್ನು ಈ ಸಮಾರಂಭ ತಿಳಿಸುತ್ತದೆ. ತಾವು ಪಡೆದಿದ್ದನ್ನು ಸಮಾಜಕ್ಕೆ ನೀಡುವ ಅರ್ಥಪೂರ್ಣ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 ಚುಟುಕು ಸಾಹಿತಿ ಎಚ್. ಡುಂಡಿರಾಜ್ ಮಾತನಾಡಿ, ನಮ್ಮ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೆ ಅದೇ ದೊಡ್ಡ ಸಾಧನೆಯಾಗಿತ್ತು. ನಮಗೆಷ್ಟು ಅಂಕಗಳು ಬಂದವೆಂದು ತಂದೆ ತಾಯಿ ಕೇಳುತ್ತಿರಲಿಲ್ಲ. ಬರಿಗಾಲಿನಲ್ಲಿ ನಡೆದು ಶಾಲೆಗೆ ಹೋಗುತ್ತಿದ್ದೆವು. ಶಾಲಾ ಕಟ್ಟಡವೂ ಮಳೆ ಬಂದಾಗ ಸೋರುತ್ತಿತ್ತು ಎಂದರು.
 ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಈಗಿನ ವಿದ್ಯಾರ್ಥಿಗಳು ಅದೃಷ್ಟವಂತರಿದ್ದಾರೆ. ಸುಸಜ್ಜಿತ ಶಾಲೆ, ಹೋಗಿ ಬರಲು ಬಸ್ ಸೌಕರ್ಯ ಇದೆ. ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳೂ ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಸ್ಪರ್ಧಾತ್ಮಕ ವಾತಾವರಣವಿದೆ ಎಂದು ತಿಳಿಸಿದರು.
 ವಿದ್ಯಾರ್ಥಿಗಳಿಗೆ ಗೆಲುವಿನ ರುಚಿ ಹತ್ತಿದರೆ ಬಿಡುವುದಿಲ್ಲ. ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿಯಲ್ಲಿ ಸಾಧನೆಗೆ ಅವಕಾಶವಿರುತ್ತದೆ. ಜೀವನದಲ್ಲಿ ಹಿಂದೆ ಗುರು, ಮುಂದೆ ಗುರಿ ಇರಬೇಕು ಎಂದು ಸಲಹೆ ನೀಡಿದರು.
 ಪ್ರತಿಷ್ಠಾನದ ಸಂಸ್ಥಾಪಕ ಡಾ. ನಲ್ಲೂರು ಅರುಣಾಚಲ ಎನ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಪ್ರೇಮಾ ಅರುಣಾಚಲ ಎನ್. ರೇವಣಕರ್, ಬೆಳಗಾವಿಯ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ದಯಾನಂದ ಜಿ. ನೇತಲ್‌ಕರ್, ಸರಾಫ್ ಜುವೆಲರ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎಸ್. ನಲ್ಲೂರು ರಾಜಕುಮಾರ್ ಇದ್ದರು.
 ಕವಿ ಬಿ.ಆರ್. ಲಕ್ಷ್ಮಣರಾವ್ ರಚಿಸಿದ ‘ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’ ಗೀತೆಯನ್ನು ಯಶಾ ದಿನೇಶ್ ಪ್ರಸ್ತುತಪಡಿಸಿದರು.