ದಾವಣಗೆರೆ : ಹನ್ನೆರಡನೇ ಶತಮಾನದ ದಾರ್ಶನಿಕರು ರೂಪಿಸಿದ ಅನ್ನ ದಾಸೋಹ, ಅಕ್ಷರ ದಾಸೋಹದ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದು ಆರೋಗ್ಯ ದಾಸೋಹ ಎಂಬ ಕಾಯಕ ಸೇವೆಯನ್ನು ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ಪ್ರಾರಂಭಿಸಿದ್ದೇವೆ ಎಂದು ನಗರದ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಹೇಳಿದರು.
ಬೆಂಗಳೂರಿನ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್‌ಹಾಲ್)ದಲ್ಲಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರೀತಿ ಅವರ ಅಕಾಲಿಕ ಮರಣದ ನಂತರ ‘ಪ್ರೀತಿ ಆರೈಕೆ ಟ್ರಸ್ಟ್’ ಸ್ಥಾಪಿಸಲಾಯಿತು. ಗ್ರಾಮೀಣ ಭಾಗದ ಜನರಿಗೆ ತಮ್ಮ ದೇಹಾರೋಗ್ಯದ ಸ್ಥಿತಿಗತಿಯ ಬಗ್ಗೆ ಅರಿವು ಇರುವುದಿಲ್ಲ. ಹೀಗಾಗಿ ಅಕಾಲಿಕ ಕಾಯಿಲೆ, ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನು ಮನಗಂಡು ಟ್ರಸ್ಟ್ ಮೂಲಕ ಜಿಲ್ಲೆಯ ಪ್ರತಿ ತಾಲೂಕು, ಹೋಬಳಿ, ಗ್ರಾಮಗಳ ಮಟ್ಟದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುತ್ತಿದ್ದೇವೆ. ಈಗಾಗಲೇ 36ಕ್ಕೂ ಹೆಚ್ಚಿನ ಶಿಬಿರಗಳು ನೆರವೇರಿದ್ದು, 14 ಸಾವಿರ ನಾಗರಿಕರಿಗೆ ಸೇವೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಜಗಳೂರು ಮಾಜಿ ಶಾಸಕ ಟಿ. ಗುರುಸಿದ್ಧನಗೌಡ ಇದ್ದರು.