ದಾವಣಗೆರೆ : ಕಾನೂನಿನ ಚೌಕಟ್ಟಿನೊಳಗೆ ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ಕರ್ತವ್ಯ ನಿರ್ವಹಣೆ ಹಾಗೂ ತಮ್ಮ ಸಾಹಿತ್ಯದ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶ್ರಮಿಸಿರುವ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರು ಸಮಾಜಕ್ಕೆ ಊರುಗೋಲಾಗಿದ್ದಾರೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ, ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರಿಗೆ 2025 ರ ಸಾಲಿನ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಸಂದೇಶ ನೀಡಿದರು. ಜನಿಸಿದ ಕುಗ್ರಾಮದಿಂದ ದೇಶದ ಸರ್ವೋಚ್ಚ ನ್ಯಾಯಾಲಯದ ತನಕ ಅವರು ತಲುಪಿದ ಹಾದಿಯಲ್ಲಿ ಏರಿದ ಒಂದೊಂದು ಮೆಟ್ಟಿಲುಗಳು ಅವರ ಯಶೋಗಾಥೆಯನ್ನು ಪ್ರತಿಬಿಂಬಿಸುತ್ತವೆ. ಕಡು ಬಡತನ, ಕುಗ್ರಾಮದ ಪರಿಸರವನ್ನು ಮೆಟ್ಟಿ ನಿಂತು ಅವರು ತೋರಿದ ಅಸಾಮಾನ್ಯ ಸಾಧನೆ ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದು ಹೇಳಿದರು. ಪ್ರತಿಷ್ಠಾನದ ಅಧ್ಯಕ್ಷ ಸಂಗಮೇಶ್ವರ ಗೌಡರು ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರನ್ನು ಅಭಿನಂದಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎ. ಮುರಿಗೆಪ್ಪ ಮಾತಾಡಿದರು. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ ಮಾಗನೂರು ಬಸಪ್ಪ ಅವರ ಜೀವನ ಮತ್ತು ಸಾಧನೆಯ ಕುರಿತಾಗಿ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಅಭಿನಂದನಾ ಪತ್ರವನ್ನು ವಾಚಿಸಿದರು. ಎಂ.ಎಸ್. ಸುನಂದಾ ದೇವಿ, ಅನ್ನಪೂರ್ಣ ಶಿವರಾಜ ಪಾಟೀಲ ಇದ್ದರು. ಸಮಾರಂಭದಲ್ಲಿ ನ್ಯಾಯಾಧೀಶರು, ವಕೀಲರು, ಮಾಜಿ ಸಚಿವೆ ಡಾ.ಬಿ.ಟಿ. ಲಲಿತಾ ನಾಯಕ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಅಮರೇಶ್ ಯತ್ಗಲ್, ವಿಶ್ರಾಂತ ಪೋಲಿಸ್ ಅಧಿಕಾರಿ ಶಂಕರ ಬಿದರಿ, ಶಿಕ್ಷಣ ತಜ್ಞ ಡಾ.ಎಚ್.ವಿ. ವಾಮದೇವಪ್ಪ, ಮಾಗನೂರು ಚಂದ್ರಶೇಖರ ಗೌಡರು, ಮಾಗನೂರು ಪ್ರಭುದೇವ್ ಪಾಲ್ಗೊಂಡಿದ್ದರು. ದಾವಣಗೆರೆ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಸುಮತಿ ಜಯಪ್ಪ, ಡಿ.ಎಂ.ಮಂಜುನಾಥಯ್ಯ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ನ ಎಸ್.ಆರ್. ಶಿರಗುಂಬಿ, ಪ್ರಾಚಾರ್ಯೆ ಎ.ಎಸ್. ಕುಸುಮ ಭಾಗವಹಿಸಿದ್ದರು.