ಜಿಲ್ಲೆ

ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ

ರಮೇಶ ಜಹಗೀರದಾರ್

ದಾವಣಗೆರೆ :  ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಮತ್ತು ಕನ್ನಡ ಕುವರ-ಕುವರಿ ಪ್ರಶಸ್ತಿಗಳ ಪ್ರದಾನ ಸಮಾರಂಭ ಜು. 19 ಮತ್ತು 20ರಂದು ಬೆಳಗ್ಗೆ 10 ಗಂಟೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.  ಸಂಸ್ಥೆಯ ಅಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮಗಳ ವಿವರ ನೀಡಿದರು.  ಜು. 19ರಂದು ನಡೆಯುವ ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದೂರದರ್ಶನ ಕೇಂದ್ರದ ನಿರೂಪಕ ಎಚ್. ರಾಜಶೇಖರ್ ಉದ್ಘಾಟಿಸುವರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಡಾ. ನಾಗರಾಜ ಬೈರಿ ಪಾಳ್ಗೊಳ್ಳಲಿದ್ದಾರೆ. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್ ಶೆಣೈ, ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಉಪಸ್ಥಿತರಿರುವರು ಎಂದು ತಿಳಿಸಿದರು.  ಜು. 20ರಂದು ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಿರಿಯ ಗಾಯಕ ಪುತ್ತೂರು ನರಸಿಂಹ ನಾಯಕ್ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಗೌರಮ್ಮ ಮೋತಿ ರಾಮರಾವ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಆರ್. ಪರಮೇಶ್ವರ್ ರಾವ್, ಕಲಾಕುಂಚದ ಅಧ್ಯಕ್ಷ ಕೆ.ಎಚ್. ಮಂಜುನಾಥ್ ಭಾಗವಹಿಸುವರು. ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷೆ ವಸಂತಿ ಮಂಜುನಾಥ್, ಬಾಲ ನೃತ್ಯಕಲಾವಿದೆ ಶ್ರೇಷ್ಠ ರಾಮಚಂದ್ರ ದೇವಾಡಿಗ ಪಾಲ್ಗೊಳ್ಳುವರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಕ್ಕಳಿಗೆ ಮಂಗಳ ವಾದ್ಯ, ಪೂರ್ಣ ಕುಂಭದೊಂದಿಗೆ ವೇದಿಕೆಗೆ ಸ್ವಾಗತಿಸಲಾಗುತ್ತದೆ ಎಂದು ಹೇಳಿದರು.  ವಿ. ಕೃಷ್ಣಮೂರ್ತಿ, ಜ್ಯೋತಿ ಶೆಣೈ, ಲಲಿತಾ ಕಲ್ಲೇಶ್, ಕೆ.ಸಿ. ಉಮೇಶ್, ಶಾಂತಪ್ಪ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.