ಜಿಲ್ಲೆ

ಸ್ಮರಣೋತ್ಸವ, ‘ಚರಂತಾರ್ಯ ಶ್ರೀ’ ಪ್ರಶಸ್ತಿ ಪ್ರದಾನ

ರಮೇಶ ಜಹಗೀರದಾರ್

ದಾವಣಗೆರೆ :  ನಂದಿಪುರ ಪುಣ್ಯಕ್ಷೇತ್ರದ ಶ್ರೀ ಗುರು ದೊಡ್ಡ ಬಸವೇಶ್ವರ ಸೇವಾ ಸಮಿತಿಯಿಂದ, ಶ್ರೀ ಗುರು ಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಸ್ಮರಣೋತ್ಸವ, ‘ಚರಂತಾರ್ಯ ಶ್ರೀ’ ಪ್ರಶಸ್ತಿ ಪ್ರದಾನ, ಗ್ರಂಥ ಲೋಕಾರ್ಪಣೆ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಭಾನುವಾರ ಸಂಜೆ 5 ಗಂಟೆಗೆ ನಗರದ ಪಿ.ಪಿ. ರಸ್ತೆಯಲ್ಲಿರುವ ಶ್ರೀಶೈಲ ಮಠದಲ್ಲಿ ನಡೆಯಲಿದೆ.  ಅಂದು ‘ಚರಂತಾರ್ಯ ಶ್ರೀ’ ಪ್ರಶಸ್ತಿಯನ್ನು ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು, ಸಮಿತಿಯ ಸಂಚಾಲಕ ಗುರುಬಸವರಾಜಯ್ಯ ನಂದಿಪುರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಅಂದು ನಡೆಯುವ ಧರ್ಮ ಸಮಾರಂಭದ ಸಾನ್ನಿಧ್ಯವನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ವಹಿಸಲಿದ್ದಾರೆ. ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇನ್ನಿತರ ಮಠಾಧೀಶರು ಸಮ್ಮುಖ ವಹಿಸುವರು ಎಂದರು.  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಇನ್ನಿತರ ಗಣ್ಯರು ಪಾಲ್ಗೊಳ್ಳುವರು. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸಹಾಯಕ ಕುಲಸಚಿವ ಡಾ.ಎಂ.ಎಂ. ಶಿವಪ್ರಕಾಶ್ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಗಂಗಾವತಿಯ ಸಾಹಿತಿ ಎಸ್.ವಿ. ಪಾಟೀಲ್ ಗುಂಡೂರು ಹಾಗೂ ಇತರರು ಭಾಗವಹಿಸುವರು ಎಂದು ಹೇಳಿದರು.  ಸಮಿತಿಯ ವಿನುತಾ ರವಿ, ಶಿವಪ್ರಸಾದ್, ರಾಜು ವೀರಣ್ಣ, ಧನಂಜಯ, ಜಯರಾಜ್, ಬಿ.ಎಂ. ನಾಗರಾಜ ಸುದ್ದಿಗೋಷ್ಠಿಯಲ್ಲಿದ್ದರು.  ...