ಜಿಲ್ಲೆ

ರಾಜ್ಯಮಟ್ಟದಲ್ಲಿ ಗಮನ ಸೆಳೆದ ಬೆಣ್ಣೆನಗರಿ

ರಮೇಶ ಜಹಗೀರದಾರ್

ರಮೇಶ ಜಹಗೀರದಾರ್ ದಾವಣಗೆರೆ
 ಕೇಂದ್ರ ಸರ್ಕಾರದ ‘ಮೇರಿ ಲೈಫ್ ಮೇರಾ ಸ್ವಚ್ಛ ಶಹರ್’ ಅಭಿಯಾನದ ಅಂಗವಾಗಿ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ರಾಜ್ಯದ 6 ನಗರಗಳಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯೂ ಒಂದಾಗಿದೆ.
 ಬಿಬಿಎಂಪಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು ಮಹಾನಗರ ಪಾಲಿಕೆಗಳು ಮತ್ತು ಹಾಸನ ನಗರಸಭೆಗೂ ಈ ಪ್ರಶಸ್ತಿ ದೊರಕಿದೆ. ಜು. 27ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಈ ನಗರ ಸ್ಥಳೀಯ ಸಂಸ್ಥೆಗಳನ್ನು ಪೌರಾಡಳಿತ ನಿರ್ದೇಶನಾಲಯ ಗೌರವಿಸಲಿದೆ. ಈ ಬಗ್ಗೆ ದಾವಣಗೆರೆ ಮಹಾನಗರ ಪಾಲಿಕೆಗೆ ಪತ್ರ ಬಂದಿದೆ.
 ...
 * ಹಳೇ ವಸ್ತುಗಳ ಮರುಬಳಕೆ
 ದಾವಣಗೆರೆ ಮಹಾನಗರ ಪಾಲಿಕೆಯು 10 ವಾರ್ಡ್‌ಗಳಲ್ಲಿ ಒಟ್ಟು 10 ತ್ರಿಬಲ್ ಆರ್ ಕೇಂದ್ರಗಳನ್ನು ಸ್ಥಾಪಿಸಿದೆ. ‘ತ್ರಿಬಲ್ ಆರ್’ ಎಂದರೆ ರೆಡ್ಯೂಸ್, ರೀಯೂಸ್, ರೀಸೈಕಲ್.
 ಆಟಿಕೆ ವಸ್ತುಗಳು, ಬಳಸಿದ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಎಲೆಕ್ಟ್ರಾನಿಕ್ ವಸ್ತುಗಳು. ಇಂಥವು ಮರುಬಳಕೆ ಮಾಡಲು ಸಾಧ್ಯವಿದೆ. ಅವುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ನಗರವನ್ನು ಭವಿಷ್ಯದ ದೃಷ್ಟಿಯಿಂದ ಸುಸ್ಥಿರವಾಗಿಸುವುದು ಇದರ ಉದ್ದೇಶ.
 ಮೇ 15 ರಿಂದ ಜೂನ್ 5ರ ವರೆಗೆ ನಡೆದ ಅಭಿಯಾನದಲ್ಲಿ 1093 ಜನರು ಕೈಜೋಡಿಸಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ನೀಡಿದ್ದಾರೆ. ಕೇಂದ್ರಗಳಿಗೆ ಬರಲು ಆಗದವರ ಅನುಕೂಲಕ್ಕಾಗಿ ಮನೆ ಮನೆಗೆ ತೆರಳಿ ವಸ್ತುಗಳನ್ನು ಸಂಗ್ರಹಿಸುವ ಅಭಿಯಾನವನ್ನೂ ಮಾಡಲಾಯಿತು.
 ಸಂಗ್ರಹವಾದ ಹಳೇ ಆಟಿಕೆಗಳನ್ನು ಅನಾಥಾಶ್ರಮಗಳಿಗೆ, ಹಳೆಯ ಪುಸ್ತಕಗಳನ್ನು ಸಮೀಪದ ಗ್ರಂಥಾಲಯಗಳಿಗೆ, ಬಟ್ಟೆಗಳನ್ನು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ನೀಡಲಾಗುತ್ತಿದೆ. ಕೇಂದ್ರಗಳಿಗೆ ವಸ್ತುಗಳನ್ನು ತಂದು ಕೊಟ್ಟವರಿಗೆ ಉತ್ತೇಜನ ನೀಡಲು ಬಟ್ಟೆಯ ಚೀಲ, ಪೆನ್. ಪುಸ್ತಕ, ಟಿ-ಶರ್ಟ್ ಇತ್ಯಾದಿಗಳನ್ನು ನೀಡಲಾಗಿದೆ.
 ಅಭಿಯಾನದ ವೇಳೆ ಒಟ್ಟು 726 ಹಳೆಯ ಪುಸ್ತಕ, 894 ಕೆಜಿ ಉಪಯೋಗಿಸಿದ ಬಟ್ಟೆ, 116 ಕೆಜಿಯಷ್ಟು ತೂಕದ ಆಟಿಕೆಗಳು, 176 ಇ-ತ್ಯಾಜ್ಯ, 111 ಕೆಜಿ ಹಳೆಯ ದಿನಪತ್ರಿಕೆಗಳನ್ನು ಸಂಗ್ರಹಿಸಲಾಗಿದೆ.
 ...
 (ಕೋಟ್)
 ನನ್ನ ಲೈಫ್, ನನ್ನ ಸ್ವಚ್ಛ ನಗರ ಅಭಿಯಾನವನ್ನು ಪರಿಣಾಮಕಾರಿಯಾಗಿ ಮಾಡಿದ್ದರಿಂದ ದಾವಣಗೆರೆ ಮಹಾನಗರ ಪಾಲಿಕೆಗೆ ಪ್ರಶಸ್ತಿ ಬಂದಿದೆ. ಪ್ಲಾೃಸ್ಟಿಕ್ ನಿರ್ವಹಣೆ, ತ್ಯಾಜ್ಯ ವಿಂಗಡಣೆ, ಮನೆ ಮನೆಗೆ ತೆರಳಿ ಕಸ ಸಂಗ್ರಹದಂಥ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಇದರಲ್ಲಿ ನಾಗರಿಕರ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ.
  ರೇಣುಕಾ, ಮಹಾನಗರ ಪಾಲಿಕೆ ಆಯುಕ್ತೆ