ದಾವಣಗೆರೆ : ನಗರದಲ್ಲಿ ಸಿಎನ್‌ಜಿ ಗ್ಯಾಸ್ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಆಗ್ರಹಿಸಿ ದಾವಣಗೆರೆ ಸ್ಮಾರ್ಟ್‌ಸಿಟಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು. ಸಂಸದರ ನಿವಾಸದ ಬಳಿ ಸೇರಿದ ಸಿಎನ್‌ಜಿ ಆಟೋ ಚಾಲಕರು ಘೋಷಣೆಗಳನ್ನು ಕೂಗಿ, ತಮಗೆ ಆಗಿರುವ ತೊಂದರೆಯನ್ನು ಸರಿಪಡಿಸುವಂತೆ ಒತ್ತಾಯಿಸಿದರು. ನಗರದಲ್ಲಿ ಸಿಎನ್‌ಜಿ ಆಧಾರಿತ 4 ಸಾವಿರಕ್ಕೂ ಹೆಚ್ಚು ಕಾರು, ಆಟೋ, ಬೈಕ್, ಬಸ್, ಲಾರಿ ಇನ್ನಿತರ ವಾಹಗಳಿವೆ. ಅವುಗಳಿಗೆ ಪ್ರತಿ ದಿನ 5 ಲೋಡ್‌ಗಳಷ್ಟು ಸಿಎನ್‌ಜಿಯ ಅಗತ್ಯವಿದೆ. ಆದರೆ ಕೇವಲ 2 ಲೋಡ್‌ನಷ್ಟು ಪೂರೈಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಇಲ್ಲಿನ ವಾಹನಗಳ ಸಂಖ್ಯೆಯ ಆಧಾರದ ಮೇಲೆ 6 ಗ್ಯಾಸ್ ಬಂಕ್‌ಗಳು ಬೇಕಾಗುತ್ತವೆ. ಆದರೆ 3 ಮಾತ್ರ ಇವೆ ಎಂದು ಹೇಳಿದರು. ಸಿಎನ್‌ಜಿ ಚಿತ್ರದುರ್ಗದಿಂದ ಸರಬರಾಜು ಆಗುತ್ತಿದೆ. ಅದರ ಏಜೆಂಟರು ಸರಿಯಾಗಿ ಪೂರೈಕೆ ಮಾಡದ ಕಾರಣ ವ್ಯತ್ಯಯ ಉಂಟಾಗಿದೆ ಎಂದು ಮಾಹಿತಿ ನೀಡಿದರು. ಬಂಕ್ ಬಳಿ ರಾತ್ರಿ ಹೋಗಿ ಸರದಿ ಸಾಲಿನಲ್ಲಿ ನಿಂತರೆ ಆರೇಳು ಗಂಟೆ ಕಾಯಬೇಕು. ಅಷ್ಟು ಕಾದರೂ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಇರುವುದಿಲ್ಲ. ಕೆಲಸ ಬಿಟ್ಟು ಕಾಯುವ ಅನಿವಾರ್ಯತೆ ಎದುರಾಗಿದೆ. ಆಟೋದಲ್ಲೇ ಮಲಗಿಕೊಳ್ಳಬೇಕಾಗಿದೆ ಎಂದರು. ಏ. 1 ರಿಂದ ಸಿಎನ್‌ಜಿ ಅಭಾವ ಸೃಷ್ಟಿಯಾಗಿದೆ. ನಗರದಲ್ಲಿ ಅಭಾವ ಇರುವ ಕಾರಣ ಕೆಲವರು ಹರಿಹರ, ರಾಣೇಬೆನ್ನೂರು ವರೆಗೆ ಹೋಗಿ ಸಿಎನ್‌ಜಿ ತರುತ್ತಿದ್ದಾರೆ. ಆಟೋ ಓಡಿಸದೇ ಮನೆ ಮುಂದೆ ನಿಲ್ಲಿಸಿದರೆ ದುಡಿಮೆ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಸಾಲದ ಕಂತು, ಮನೆ ಬಾಡಿಗೆ ಕಟ್ಟುವುದು, ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ಸಮಸ್ಯೆಯಾಗುತ್ತಿದೆ ಎಂದು ಹೇಳಿಕೊಂಡರು. ಸಂಘದ ಜಿಲ್ಲಾಧ್ಯಕ್ಷ ಎಚ್. ಅಣ್ಣಪ್ಪ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಕೊಟ್ರೇಶಪ್ಪ, ಖಜಾಂಚಿ ಎಚ್.ಆರ್. ರಾಘವೇಂದ್ರ, ಶಾಲಾ ಮಕ್ಕಳ ಆಟೋ ಹಾಗೂ ವ್ಯಾನ್ ಚಾಲಕರ ಸಂಘದ ಜಿಲ್ಲಾಧ್ಯಕ್ಷ ವಿ. ಮಂಜುನಾಥ್ ಇತರರು ಇದ್ದರು.