ದಾವಣಗೆರೆ : ನಮ್ಮ ಜೀವನ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಸರ ರಕ್ಷಣೆಗೆ ಕೈಜೋಡಿಸಬೇಕು ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಮಹಿಳೆಯರಿಗೆ ಸಲಹೆ ನೀಡಿದರು. ವನಿತಾ ಸಮಾಜದಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ನಾಗಮ್ಮ ಕೇಶವಮೂರ್ತಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ಕೆಲವು ಕಡೆಗಳಲ್ಲಿ ಸರಿಪಡಿಸಲು ಆಗದ ಸ್ಥಿತಿಯನ್ನು ತಲುಪಿದ್ದೇವೆ. ಜಾಣ ಕುರುಡರಾಗುವುದು ಬಿಟ್ಟು ಕಣ್ಣು ತೆರೆಯಬೇಕಿದೆ. ಹಸಿರು ಹೊದಿಕೆ ಮತ್ತು ಜೀವ ವೈವಿಧ್ಯತೆ ಕಾಪಾಡಬೇಕಿದೆ ಎಂದು ತಿಳಿಸಿದರು. ಅಡುಗೆ ಮನೆಯನ್ನು ಕಸಮುಕ್ತವಾಗಿಡಲು ಪ್ರಯತ್ನಿಸಬೇಕು. ತ್ಯಾಜ್ಯವನ್ನೇ ಇಂಧನವಾಗಿ ಪರಿವರ್ತಿಸಲು ಸಾಧ್ಯವಿದೆ. ಹಾಲಿನ ಕವರ್‌ಗಳನ್ನು ಸರಿಯಾಗಿ ಕತ್ತರಿಸಿ ಮರುಬಳಕೆ ಮಾಡುವಂತಾಗಬೇಕು. ಸ್ಯಾನಿಟರಿ ಪ್ಯಾಡ್‌ಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು. ಪ್ಲ್ಯಾಸ್ಟಿಕ್‌ಗೆ ಪರ್ಯಾಯ ಹುಡುಕಬೇಕು. ಮಹಿಳೆಯರಲ್ಲಿ ಈ ಜಾಗೃತಿ ಮೂಡಬೇಕು ಎಂದು ಹೇಳಿದರು. ಆಹಾರ ಮತ್ತು ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತ, ಪೌಷ್ಟಿಕಾಂಶ ಮಟ್ಟದಲ್ಲಿ ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಹಿಂದೆ ಇದೆ. ಬದಲಾದ ಆಹಾರ ಮತ್ತು ಜೀವನ ಪದ್ಧತಿ ಇದಕ್ಕೆ ಕಾರಣವಾಗಿವೆ ಎಂದರು. ಕಾಗದ ಪರಿಸರಸ್ನೇಹಿ ಎನ್ನುವುದು ಸರಿಯಲ್ಲ. ಕಾಗದ ತಯಾರಿಸಲು ಮರಗಳನ್ನು ಕತ್ತರಿಸಬೇಕು. ಕಾಗದ ಉತ್ಪಾದನೆಗೆ ವಿದ್ಯುತ್ ಬೇಕು. ಹಾಗಾಗಿ ನಮ್ಮ ವಿಚಾರಗಳೂ ಬದಲಾಗಬೇಕು ಎಂದು ಹೇಳಿದರು. ಭಾರತೀಯ ಮೂಲಕ ಸುನಿತಾ ವಿಲಿಯಮ್ಸ್ ಅಂತರಿಕ್ಷದಲ್ಲಿ ಮಾಡಿದ ಸಾಧನೆಯನ್ನು ಪ್ರಸ್ತಾಪಿಸಿದ ಅವರು, ಮಂಗಳಯಾನ, ಚಂದ್ರಯಾನದಂಥ ಬಾಹ್ಯಾಕಾಶ ಯೋಜನೆಗಳಲ್ಲೂ ಮಹಿಳಾ ವಿಜ್ಞಾನಿಗಳು ಮಹತ್ವದ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, 50ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ ಸಮಾಜಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ನಾಗಮ್ಮ ಕೇಶವಮೂರ್ತಿ ಅವರ ಕುರಿತು ಪುಸ್ತಕ ರಚಿಸಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಉಷಾ ರಂಗನಾಥ್ ಪ್ರಾಸ್ತಾವಿಕ ಮಾತನಾಡಿ, ಕಲಾಕ್ಷೇತ್ರ ಮಾಡುವುದು ನಾಗಮ್ಮ ಅವರ ಕನಸಾಗಿತ್ತು. ಅದನ್ನು ಲಲಿತಕಲೆಗಳ ತಾಣವಾಗಿಸುವ ಉದ್ದೇಶ ಅವರಿಗಿತ್ತು. ಈಗ ಅವರ ಹೆಸರಿನ ಸಭಾಂಗಣ ನಿರ್ಮಾಣವಾಗಿದೆ. ಇದಕ್ಕೆ ಅನೇಕ ದಾನಿಗಳು ನೆರವಾಗಿದ್ದಾರೆ ಎಂದು ಸ್ಮರಿಸಿದರು. ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಪಾಲಿಕೆ ಮಾಜಿ ಸದಸ್ಯ ಕೆ. ಪ್ರಸನ್ನ ಕುಮಾರ್ ಮಾತನಾಡಿದರು. ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಸಿ.ಆರ್. ವಿರೂಪಾಕ್ಷಪ್ಪ, ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ್, ನಳಿನಿ ಅಚ್ಯುತ್, ಸುಷ್ಮಾ, ನಾಗರತ್ನಾ ಇದ್ದರು. ಲತಿಕಾ ದಿನೇಶ್ ಶೆಟ್ಟಿ ಸ್ವಾಗತಿಸಿದರು. ಅನುರಾಧಾ ಬಕ್ಕಪ್ಪ ನಿರೂಪಿಸಿದರು. ... (ಬಾಕ್ಸ್) ನಾಗಮ್ಮ ಸೇವೆ ಪ್ರೇರಣಾದಾಯಕ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರು ಮಾಡಿದ ಸಮಾಜಸೇವೆ ಪ್ರೇರಣಾದಾಯಕವಾಗಿದೆ ಎಂದು ತೇಜಸ್ವಿನಿ ಅನಂತ ಕುಮಾರ್ ಹೇಳಿದರು. ಐವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ ಸಮಾಜಸೇವೆಗೆ ಬದುಕನ್ನು ಅರ್ಪಿಸಿಕೊಂಡಿದ್ದು ಸಾಮಾನ್ಯ ವಿಷಯವಲ್ಲ. ಬದಲಾವಣೆ ಮಾಡಿ ತೋರಿಸುವ ಮೂಲಕ ಹೇಗೆ ಬದುಕಬೇಕು ಎಂಬ ಸಂದೇಶ ನೀಡಿದ್ದಾರೆ ಎಂದು ಶ್ಲಾಘಿಸಿದರು. ವನಿತಾ ಸಮಾಜದ ಸದಸ್ಯರು ನಾಗಮ್ಮ ಅವರ ಹೆಸರಿನಲ್ಲಿ ಸಭಾಂಗಣ ನಿರ್ಮಿಸಿ ನಿಜವಾದ ಅರ್ಥದಲ್ಲಿ ಮಹಿಳಾ ದಿನವನ್ನು ಆಚರಿಸಿದ್ದಾರೆ. ಈ ಕಟ್ಟಡ ಕೇವಲ ಸಿಮೆಂಟ್, ಇಟ್ಟಿಗೆಯದಲ್ಲ, ಸೇವಾ ಮನೋಭಾವದ ಪ್ರತೀಕ ಎಂದರು. ಬೆಂಗಳೂರಿನಲ್ಲಿ ತಾವು ನಡೆಸುತ್ತಿರುವ ಅದಮ್ಯ ಚೇತನ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಶೀಘ್ರದಲ್ಲೇ ಅಯೋಧ್ಯೆಯಲ್ಲೂ ಊಟದ ವ್ಯವಸ್ಥೆ ಮಾಡುವ ಯೋಜನೆಯಿದೆ ಎಂದು ತಿಳಿಸಿದರು.