ದಾವಣಗೆರೆ : ಹೊರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಸರ್ಕಾರವೇ ನೇರವಾಗಿ ಡಿ ದರ್ಜೆ ನೌಕರರ ಖಾತೆಗೆ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮುಖ್ಯಮಂತ್ರಿಗೆ ಮನವಿ ಮಾಡಿದರು. ವಿಧಾನಸಭೆಯಲ್ಲಿ ಬುಧವಾರ ನಡೆದ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಕೆ.ಎಸ್. ಬಸವಂತಪ್ಪ ಈ ವಿಷಯ ಪ್ರಸ್ತಾಪಿಸಿದರು. ಜಿಲ್ಲೆಯ ಸರ್ಕಾರಿ ಆಸ್ಪತ್ರೆ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಎಪಿಎಂಸಿ ಹಾಗೂ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಗುತ್ತಿಗೆದಾರರು ಪ್ರತಿ ತಿಂಗಳು ಸರಿಯಾಗಿ ವೇತನ, ವಿವಿಧ ಸೌಲಭ್ಯ ನೀಡದೆ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ದೂರಿದರು. ಕಾರ್ಮಿಕ ಕಾಯ್ದೆ ಪ್ರಕಾರ ಪ್ರತಿ ನೌಕರನಿಗೆ 17500 ಸಾವಿರ ರೂ. ವೇತನ ಕೊಡಬೇಕು. ಆದರೆ, ಗುತ್ತಿಗೆ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳು ಶಾಮೀಲಾಗಿ ಒಬ್ಬ ನೌಕರನಿಗೆ ತಿಂಗಳಿಗೆ 10 ಸಾವಿರ ರೂ. ಕೊಡುತ್ತಾರೆ. ಇದನ್ನೂ ಸಮಯಕ್ಕೆ ಸರಿಯಾಗಿ ಕೊಡುವುದಿಲ್ಲ. ಸರಿಯಾಗಿ ಇಎಸ್‌ಐ, ಪಿಎಫ್ ಕಟ್ಟುತ್ತಿಲ್ಲ. ಇದರಿಂದಾಗಿ ನೌಕರರು ಅನಾರೋಗ್ಯದಿಂದ ಬಳಲಿ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೆಲವು ನೌಕರರು ಜೀವ ಕಳೆದುಕೊಂಡ ಉದಾಹರಣೆಗಳಿವೆ. ಇದು ಕೇವಲ ದಾವಣಗೆರೆ ಜಿಲ್ಲೆಯ ಸಮಸ್ಯೆಯಲ್ಲ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪ್ರತಿಯೊಬ್ಬ ಡಿ ದರ್ಜೆ ನೌಕರರ ಸಮಸ್ಯೆ ಎಂದು ಹೇಳಿದರು. ಸರ್ಕಾರ ಕೂಡಲೇ ಹಾರನಹಳ್ಳಿ ರಾಮಸ್ವಾಮಿ ವರದಿ ತಿರಸ್ಕರಿಸಿ, ಹೊರಗುತ್ತಿಗೆ ರದ್ದು ಮಾಡಿ ಕಾರ್ಮಿಕ ಕಾಯ್ದೆಯಂತೆ ವೇತನ ನೇರವಾಗಿ ಅವರ ಖಾತೆಗೆ ಪಾವತಿ ಮಾಡುವ ಕುರಿತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಶಾಸಕ ಮಹಾಂತೇಶ ಕೌಜಲಗಿ ಸೇರಿ ಬಹುತೇಕ ಶಾಸಕರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಗುತ್ತಿಗೆದಾರರು ಹೊರ ಗುತ್ತಿಗೆ ನೌಕರರಿಗೆ ವೇತನ, ಭವಿಷ್ಯ ನಿಧಿ, ಇಎಸ್‌ಐ ಸೇರಿ ವಿವಿಧ ಸೌಲಭ್ಯ ಸರಿಯಾಗಿ ಕೊಡುತ್ತಿಲ್ಲ ಎನ್ನುವ ದೂರುಗಳಿವೆ. ಈ ಬಗ್ಗೆ ಸೂಕ್ತ ದಾಖಲೆ ಕೊಟ್ಟರೆ ಆ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ಸೊಸೈಟಿ ಸ್ಥಾಪಿಸಿ ಡಿಸಿ ಮೂಲಕ ನೇರವಾಗಿ ಅವರ ಖಾತೆಗೆ ವೇತನ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲು ಚಿಂತನೆ ಮಾಡಲಾಗಿದೆ. ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ವಿಸ್ತರಿಸಿ ಪ್ರತಿ ತಿಂಗಳು ಅವರಿಗೆ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಮಹಾನಗರ ಪಾಲಿಕೆಯಲ್ಲಿ ಇನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿದ್ದು, ಅವರನ್ನು ಖಾಯಂಗೊಳಿಸಬೇಕು. ಅದೇ ರೀತಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಡಿ ದರ್ಜೆ ನೌಕರರನ್ನು ಖಾಯಂಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಶಾಸಕ ಬಸವಂತಪ್ಪ ಮುಖ್ಯಮಂತ್ರಿಗೆ ಮನವಿ ಮಾಡಿದರು.