ದಾವಣಗೆರೆ: ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ 30 ರಿಂದ 40 ಸಾವಿರ ಪೌರ ಕಾರ್ಮಿಕರಿದ್ದು, ಗುತ್ತಿಗೆದಾರರು ಅವರ ರಕ್ತ ಹೀರುತ್ತಿದ್ದಾರೆ. ಕೂಡಲೇ ಸರ್ಕಾರ ಅವರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಗುರುವಾರ ಪೌರಕಾರ್ಮಿಕರಿಗೆ ಸದನ ವೀಕ್ಷಿಸಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಮಾತನಾಡಿ, ನಾನು ಹುಟ್ಟಿದ್ದು ದಾವಣಗೆರೆಯ ಗಾಂಧಿನಗರದಲ್ಲಿ. ನನ್ನ ತಾಯಿ ಹನುಮಕ್ಕ, ತಂದೆ ಸಂಗಪ್ಪ ಇಬ್ಬರೂ ಪೌರ ಕಾರ್ಮಿಕರು. ಆಜಾದ್ ನಗರದಲ್ಲಿ ನನ್ನ ತಾಯಿಯ ಜತೆಗೆ ಕಸ ಹೊಡೆಯಲು ಹೋಗುತ್ತಿದ್ದೆ. ಹೀಗಾಗಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಬೆಳೆದಿದ್ದೇನೆ ಎಂದು ಬಾಲ್ಯದಲ್ಲಿ ಕಳೆದ ಕಷ್ಟದ ದಿನಗಳ ಬಗ್ಗೆ ವಿವರಿಸಿದರು.
ಪೌರ ಕಾರ್ಮಿಕನ ಮಗ ಶಾಸಕನಾಗಿದ್ದೇನೆ ಎಂದರೆ ನನ್ನ ತಂದೆ, ತಾಯಿಯ ಶ್ರಮ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ಹಗಲು ದರೋಡೆ ಮಾಡಿ, ಅವರ ರಕ್ತ ಹೀರುತ್ತಿದ್ದಾರೆ. ಕೂಡಲೇ ಸರ್ಕಾರ ಅವರ ರಕ್ಷಣೆಗೆ ನಿಲ್ಲಬೇಕಾಗಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 10 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಿದ್ದರು. ಆಗ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ, ರಾಜ್ಯದಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 25 ಸಾವಿರ ಪೌರ ಕಾರ್ಮಿಕರ ಟೆಂಡರ್ ರದ್ದುಗೊಳಿಸಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದರು ಎಂದು ಸ್ಮರಿಸಿದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ವಿಧಾನ ಪರಿಷತ್ತಿನಲ್ಲಿ ಪೌರ ಕಾರ್ಮಿಕರಿಗೂ ಪ್ರಾತಿನಿಧ್ಯ ನೀಡುವುದು ಸೂಕ್ತ ಎಂದು ಸಭಾಪತಿಗಳಲ್ಲಿ ಮನವಿ ಮಾಡಿದರು.