ಜಿಲ್ಲೆ

ರಾಮ ಭಕ್ತರಿಗೆ ಬೆದರಿಕೆ, ಸೇಡಿನ ರಾಜಕಾರಣ

ರಮೇಶ ಜಹಗೀರದಾರ್

ದಾವಣಗೆರೆ : ರಾಜ್ಯದ ಕಾಂಗ್ರೆಸ್ ಸರ್ಕಾರ ರಾಮ ಭಕ್ತರನ್ನು ಬೆದರಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
 ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನಾಯಕರು ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
 ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗುತ್ತಾರೆ ಎಂದು ಇತ್ತೀಚಿನ ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ಐ.ಎನ್.ಡಿ.ಐ.ಎ ಮೈತ್ರಿಕೂಟ ಛಿದ್ರವಾಗುವ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.
 ಡಿಎಂಕೆ ನಾಯಕರು ಸನಾತನ ಧರ್ಮದ ವಿರುದ್ಧ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಹಿಂದೆ ಅಯೋಧ್ಯೆ ವಿಷಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ರಾಮಾಯಣ ಕಾಲ್ಪನಿಕ, ರಾಮ ಇದ್ದ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಅವರಿಗೆ ರಾಮ ಮಂದಿರ ನಿರ್ಮಾಣ ಆಗುವುದು ಬೇಕಿಲ್ಲ ಎಂದರು.
 ಕಟ್ಟುವೆವು ನಾವು ರಾಮ ಮಂದಿರ ಎಂಬುದು ಬಿಜೆಪಿಯ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು, ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ಹೇಳಿದರು.
 ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಮನೆ ಮನೆಗೆ ಮಂತ್ರಾಕ್ಷತೆ ನೀಡಲಾಗುತ್ತಿದೆ. ಜನರು ಅದನ್ನು ಸ್ವಾಗತಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನವರಿಗೆ ಹೊಟ್ಟೆಯುರಿಯಾಗಿದೆ. ಈ ಕಾರಣಕ್ಕೆ ಹುಬ್ಬಳ್ಳಿಯ 30 ವರ್ಷ ಹಳೆಯ ಪ್ರಕರಣಕ್ಕೆ ಮರುಜೀವ ನೀಡಿದ್ದಾರೆ ಎಂದು ತಿಳಿಸಿದರು.
 ಹುಬ್ಬಳ್ಳಿ ಪ್ರಕರಣ ಸಂಬಂಧ ಹಿಂದು ಕಾರ್ಯಕರ್ತನನ್ನು ಬಂಧಿಸುವ ಮೊದಲು ನೋಟಿಸ್ ನೀಡಿಲ್ಲ. ಆ ವ್ಯಕ್ತಿ ಕಾಣೆಯಾಗಿದ್ದ ಎಂದು ಹೇಳಿದ್ದಾರೆ. ಆದರೆ ಆತ 30 ವರ್ಷಗಳಿಂದ ಅದೇ ಪೊಲೀಸ್ ಠಾಣೆಯ ಮುಂದೆ ಆಟೋ ಓಡಿಸಿ ಜೀವನ ಮಾಡಿದ್ದಾನೆ, ಅದೇ ಪ್ರದೇಶದಲ್ಲಿ ವಾಸವಾಗಿದ್ದಾನೆ. ಬಿಜೆಪಿಯವರಿಗೆ ಕಾನೂನು ಗೊತ್ತಿದೆಯಾ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಆದರೆ ಆ ವ್ಯಕ್ತಿಗೆ ನೋಟಿಸ್ ನೀಡಬೇಕಿತ್ತು ಎನ್ನುವ ಕಾನೂನು ಪರಿಜ್ಞಾನ ಸಿಎಂಗೆ ಬೇಡವೆ ಎಂದರು.
 ಆ ವ್ಯಕ್ತಿಯನ್ನು ಯಾವ ಆಧಾರದ ಮೇಲೆ ಬಂಧಿಸಿ ಜೈಲಿಗೆ ಕಳಿಸಿದಿರಿ? ಅದೇನು ಕೊಲೆ ಪ್ರಕರಣವೆ, ದೇಶದ್ರೋಹದ ಆರೋಪ ಏನಾದರೂ ಇದೆಯೆ ಎಂದು ಪ್ರಶ್ನಿಸಿದರು.
 ಪಿಎಫ್‌ಐನವರು 40 ಕೊಲೆಗಳನ್ನು ಮಾಡಿದ್ದಾರೆ ಎಂದು ಕೇರಳ ಸರ್ಕಾರ ನ್ಯಾಯಾಲಯಕ್ಕೆ ಅಫಿಡೆವಿಟ್ ಕೊಟ್ಟಿದೆ. ಅಂಥ ಸಂಘಟನೆಯ 1700ಕ್ಕೂ ಹೆಚ್ಚು ಜನರ ವಿರುದ್ಧದ ಪ್ರಕರಣಗಳನ್ನು ನೀವು ವಾಪಸ್ ಪಡೆದಿದ್ದೀರಿ. ರಾಮ ಭಕ್ತರನ್ನು ಬಂಧಿಸುವುದು, ದೇಶದ್ರೋಹಿಗಳನ್ನು ಬಿಡುಗಡೆ ಮಾಡುವುದು ಕಾಂಗ್ರೆಸ್‌ನ ನಿಲುವಾಗಿದೆ ಎಂದು ಖಂಡಿಸಿದರು.
 ನ್ಯಾಯ ಸಿಗುವ ವರೆಗೂ ಹೋರಾಟ ಮಾಡುತ್ತೇವೆ. ಬಂಧಿತರನ್ನು ಬಿಡುಗಡೆ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
 ರಾಜ್ಯದಲ್ಲಿ ಅಯೋಧ್ಯೆ ಅಭಿಯಾನದಲ್ಲಿ ತೊಡಗಿರುವ ಹಿಂದು ಕಾರ್ಯಕರ್ತರಲ್ಲಿ ಭಯ ಹುಟ್ಟಿಸಿ ಅವರು ಮನೆ ಸೇರಿಕೊಳ್ಳುವಂತೆ ಮಾಡುವುದು. ಅದರ ಮೂಲಕ ಕಾಂಗ್ರೆಸ್‌ನ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಸಂದೇಶ ರವಾನಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದರು.
 ಬಿಜೆಪಿ ರಾಮ ಭಕ್ತರು, ಕರಸೇವಕರ ಜತೆಗಿದೆ. ಎಲ್ಲೇ ಗಲಾಟೆ ನಡೆದರೂ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಮಂತ್ರಾಕ್ಷತೆಯನ್ನು ಪಡೆದವರು ಧೈರ್ಯವಾಗಿ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುವಂತೆ ಮನವಿ ಮಾಡಿದರು.
 ಕಾಂಗ್ರೆಸ್‌ನವರಿಗೆ ಟಿಪ್ಪು ಸುಲ್ತಾನ್ ಆದರ್ಶವಾಗಿದ್ದಾನೆ. ಅವರ ಈ ಸಂಸ್ಕೃತಿಯ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಇತರ ಮುಖಂಡರು ಇದ್ದರು.
 ...