ದಾವಣಗೆರೆ : ಹತ್ತು ಸಾವಿರ ರೂ. ಗೌರವಧನ ನಿಗದಿ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಶಾಖೆಯಿಂದ ನಗರದ ಎಸಿ ಕಚೇರಿ ಎದುರು ಆ. 12ರಿಂದ ಮೂರು ದಿನ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ಮಂಜುನಾಥ ಕುಕ್ಕುವಾಡ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನವರಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ ಸಿಎಂ ಸಿದ್ದರಾಮಯ್ಯ, ಶೀಘ್ರವೇ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10 ಸಾವಿರ ರೂ. ಗೌರವಧನ ನೀಡಲಾಗುವುದು. ಮುಂದಿನ ಬಜೆಟ್ ವೇಳೆ ಸಭೆ ಕರೆದು ಮತ್ತೆ 1 ಸಾವಿರ ರೂ. ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಹಾಗಾಗಿ, ನಾವು 11 ಸಾವಿರ ರೂ. ಸಿಗಬಹುದೆಂಬ ಆಸೆಯಿಂದ ಹೋರಾಟ ವಾಪಸ್ ಪಡೆದಿದ್ದೆವು. ಆದರೆ, ಇದುವರೆಗೂ ಸಿಎಂ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಆಶಾ ಕಾರ್ಯಕರ್ತೆಯರು ಸೇವೆ ಸ್ಥಗಿತಗೊಳಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮೂರು ದಿನಗಳ ಅಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸಿಎಂ ಘೋಷಿಸಿದಂತೆ 10 ಸಾವಿರ ರೂ. ಗೌರವಧನವನ್ನು ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಬರುವ ಬಜೆಟ್‌ನಲ್ಲಿ 1 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ಜನಸಂಖ್ಯೆ ಮಿತಿಯ ನೆಪದಲ್ಲಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ಅವೈಜ್ಞಾನಿಕ ಮೌಲ್ಯಮಾಪನ ಕೈಬಿಡಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷೆ ಲಲಿತಮ್ಮ, ಎಸ್.ಆರ್. ಇಂದಿರಾ ಸುದ್ದಿಗೋಷ್ಠಿಯಲ್ಲಿದ್ದರು.