ದಾವಣಗೆರೆ: ದಾವಣಗೆರೆ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಸೆ.21 ಮತ್ತು 22ರಂದು ಕಲಾ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ 9.30ಕ್ಕೆ ಮಹಾವಿದ್ಯಾಲಯ ಆವರಣದಿಂದ ಜಾನಪದ ಕಲಾ ತಂಡಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 11.30ಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಹಾಗೂ ಕಲಾಕೃತಿಗಳ ಕ್ಯಾಟ್‌ಲಾಗ್ ಬಿಡುಗಡೆ ನಡೆಯಲಿದೆ ಎಂದರು. ಮಧ್ಯಾಹ್ನ 3 ಗಂಟೆಗೆ ಸಂಘದ ಸದಸ್ಯರು ಕಾಲೇಜಿನ ಅನುಭವ ಮೆಲುಕು ಹಾಕುವರು. ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಆಕಾಶ ಬುಟ್ಟಿಗಳ ಹಾರಾಟ ನಡೆಯಲಿವೆ ಎಂದು ಹೇಳಿದರು. ಸೆ.22ರಂದು ಬೆಳಗ್ಗೆ 9 ಗಂಟೆಗೆ ಮಹಾವಿದ್ಯಾಲಯ ಆವರಣದಲ್ಲಿ 60 ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳಿಂದ 60 ಸಸಿ ನೆಡುವ ಕಾರ್ಯಕ್ರಮ, 10 ಗಂಟೆಗೆ ಕಲಾ ಪ್ರಾತ್ಯಕ್ಷಿಕೆಗಳ ಪ್ರದರ್ಶನ, ಮಧ್ಯಾಹ್ನ 12 ಗಂಟೆಗೆ ದೃಶ್ಯ ಪ್ರಸ್ತುತಿ ಕಾರ್ಯಕ್ರಮ ನಡೆಯಲಿವೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ದೃಶ್ಯಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜೈರಾಜ್ ಎಂ. ಚಿಕ್ಕಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ ಗಣಪತಿ ಎಸ್. ಹೆಗಡೆ, ಮಹಾಂತೇಶ್ ಹರ್ತಿ, ಸುರೇಶ್ ಎಸ್. ವಾಗ್ಮೋರೆ ಸುದ್ದಿಗೋಷ್ಠಿಯಲ್ಲಿದ್ದರು.