ಜಿಲ್ಲೆ

ಸುಸ್ಥಿರ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಚಿತ್ರಕಲೆ ಪೂರಕ

reporterctd

ದಾವಣಗೆರೆ : ಸುಸ್ಥಿರ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಚಿತ್ರಕಲೆ ಪೂರಕ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಕೆ. ಶಿವಶಂಕರ್ ಹೇಳಿದರು.
 ದಾವಣಗೆರೆ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವಕಲಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಚಿತ್ರಕಲೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಉತ್ತಮ ಸಂದೇಶ ನೀಡುತ್ತದೆ. ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.
 ಚಿತ್ರ ರಚನೆಯ ಹಿಂದೆ ಕಲಾವಿದನ ಶ್ರಮ ಮತ್ತು ಕೌಶಲ ಅಡಗಿರುತ್ತದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮ. ಇಂದಿನ ಡಿಜಿಟಲ್ ಯುಗದಲ್ಲಿ 3ಡಿ ಪೇಂಟಿಂಗ್ ಮೂಲಕ ಜಾಗೃತಿ ಮೂಡಿಸಬಹುದು ಎಂದು ಹೇಳಿದರು.
 ಚಿತ್ರಕ್ಕೆ ಜೀವ ತುಂಬುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಜ್ಞಾನ ಮತ್ತು ಕೌಶಲ ಬೇಕಾಗುತ್ತದೆ. ಚಿತ್ರಕಲೆಯನ್ನು ಅವರವರ ಅಭಿರುಚಿಗೆ ತಕ್ಕಂತೆ ವಿಶ್ಲೇಷಣೆ ಮಾಡಬಹುದು. ಆದರೆ, ಈಗ ಜನರು ಮೊಬೈಲ್‌ಗೆ ಮಾರು ಹೋಗಿರುವುದರಿಂದ ಚಿತ್ರಕಲೆಯ ಅಭಿರುಚಿ ಮರೀಚಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
 ಕಪ್ಪು, ಬಿಳುಪು ಚಿತ್ರ ಗತಕಾಲಕ್ಕೆ ಕರೆದುಕೊಂಡು ಹೋಗುತ್ತದೆ. ಹಿರಿಯರ ಭಾವಚಿತ್ರ ನೋಡಿ ನಾವು ಸಂತೋಷಪಡುತ್ತೇವೆ. ಅದೇ ರೀತಿ ಇಂದಿನ ತಂತ್ರಜ್ಞಾನ ಬಳಸಿಕೊಂಡು ಮುಂದಿನ ಪೀಳಿಗೆಗೆ ತೋರಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
 ವಿವಿಯ ಕಲಾ ನಿಕಾಯದ ಮುಖ್ಯಸ್ಥ ಡಾ. ಕೆ. ವೆಂಕಟರಾವ್ ಪಲಾಟೆ ಮಾತನಾಡಿ, ಒಬ್ಬ ಚಿತ್ರಕಾರನಿಗೆ ಕೌಶಲ, ಶ್ರಮದ ಜತೆಗೆ ಭಾವನಾತ್ಮಕ ವಲಯದ ಕೊಂಡಿಯೂ ಬೆಸೆದರೆ ಮಾತ್ರ ಆ ಚಿತ್ರಕ್ಕೆ ಅರ್ಥ ಬರುತ್ತದೆ. ಜಗತ್ತಿನಲ್ಲಿ ನಾವಾಡುವ ಭಾಷೆಗೆ ಲಿಪಿ ರೂಪ ಕೊಟ್ಟಿದ್ದು ಚಿತ್ರಕಲೆ ಎಂದರು.
 ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶ್‌ಕುಮಾರ್ ಪಿ. ವಲ್ಲೇಪುರೆ, ಫ್ಯಾಷನ್ ಡಿಸೈನ್ ವಿಭಾಗದ ಡಾ. ಜೈರಾಜ್ ಎಂ. ಚಿಕ್ಕಪಾಟೀಲ ಮತ್ತು ಬೋಧನಾ ಸಹಾಯಕ ಡಾ. ಸಂತೋಷ ಕುಮಾರ್ ಕುಲಕರ್ಣಿ ಇದ್ದರು. ದತ್ತಾತ್ರೇಯ ಭಟ್ ಸ್ವಾಗತಿಸಿದರು.