ಜಿಲ್ಲೆ

ಜಾನಪದ ಮುಂದಿನ ಪೀಳಿಗೆಗೆ ತಲುಪಲಿ

ರಮೇಶ ಜಹಗೀರದಾರ್

ದಾವಣಗೆರೆ : ನಾಡಿನ ಜಾನಪದ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಅಗತ್ಯವಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.  ಶ್ರೀ ವಾಲ್ಮೀಕಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ 3ನೇ ವರ್ಷದ ವಾಲ್ಮೀಕಿ ಜಯಂತ್ಯೋತ್ಸವ ಪ್ರಯುಕ್ತ ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಜನೆ, ಕೋಲಾಟ ಹಾಗೂ ಸೋಬಾನೆ ಗಾಯನ ಸ್ಪರ್ಧೆ ಉದ್ಘಾಟಿಸಿ, ಮಾತನಾಡಿದರು.  ಜನಪದ ಕಲಾ ಪ್ರಕಾರಗಳು ನಶಿಸುತ್ತಿರುವ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಜನಪದ ಕಲೆಗಳು ನಮ್ಮ ನಡುವೆ ಇನ್ನೂ ಹಾಸು ಹೊಕ್ಕಾಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.  ಆಸ್ತಿ ಮತ್ತು ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರ ತ್ಯಾಗ ರಾಮಾಯಣವಾದರೆ, ಅದೇ ಅಧಿಕಾರ ಮತ್ತು ಆಸ್ತಿಗಾಗಿ ಸಹೋದರರ ಜಗಳ ಮಹಾಭಾರತವಾಯಿತು. ರಾಮಾಯಣದ ಮೂಲಕ ಭಾರತೀಯರ ವೈವಾಹಿಕ ಸಂಬಂಧ, ಸಹೋದರರ ಸಂಬಂಧ ಹೇಗಿರಬೇಕು ಎನ್ನುವ ನೈತಿಕ ಮೌಲ್ಯಗಳನ್ನು ರಾಮಾಯಣದ ಮೂಲಕ ವಾಲ್ಮೀಕಿ ಹೇಳಿಕೊಟ್ಟಿದ್ದಾರೆ. ಹಾಗಾಗಿ, ಮಹರ್ಷಿ ವಾಲ್ಮೀಕಿ ಭಾರತ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.  ಸಂಜೆ ಕಲಾ ಪ್ರದರ್ಶನ ವೀಕ್ಷಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಗ್ರಾಮೀಣ ಸೊಗಡಿನ ಕಲೆ ಉಳಿಸಿ, ಬೆಳೆಸುವ ಸಲುವಾಗಿ ಮುಕ್ತ ಸ್ಪರ್ಧೆ ನಡೆಯುತ್ತಿರುವುದು ಶ್ಲಾಘನೀಯ. ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆ ಅತ್ಯಂತ ಮುಖ್ಯ ಎಂದರು.  ತಹಸೀಲ್ದಾರ್ ಅಶ್ವಥ್ ಮಾತನಾಡಿ, ನಮ್ಮ ನಡುವೆ ಸಾಕಷ್ಟು ಕಲಾ ಪ್ರಕಾರ ನಶಿಸಿಹೋಗುತ್ತಿವೆ. ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಾನಪದ ಕಲೆ ಜೀವಂತವಾಗಿಡಲು ಸಹಕಾರ ನೀಡುತ್ತಿದೆ ಎಂದು ಹೇಳಿದರು.  ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಕಲಾವಿದರು ಆಗಮಿಸಿದ್ದಾರೆ. 20ಕ್ಕೂ ಹೆಚ್ಚು ಸೋಬಾನೆ ತಂಡಗಳು ಭಾಗವಹಿಸಿವೆ. ಬರುವ ವರ್ಷದಿಂದ ಸೋಬಾನೆ ಸ್ಪರ್ಧೆಗಾಗಿಯೇ ಒಂದು ದಿನ ಮೀಸಲಿಟ್ಟು ಪ್ರಶಸ್ತಿಯ ಮೊತ್ತ 50 ಸಾವಿರ ರೂ. ನಿಗದಿಪಡಿಸಲು ನಿರ್ಧರಿಸಲಾಗಿದೆ ತಿಳಿಸಿದರು.  ಎಪಿಎಂಸಿ ತರಕಾರಿ ದಲ್ಲಾಳರ ಸಂಘದ ಅಧ್ಯಕ್ಷ ಎನ್.ಎನ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಾಯಕ ವಿದ್ಯಾರ್ಥಿ ನಿಲಯದ ನಿರ್ದೇಶಕ ಡಿ.ಜಿ. ಮಂಜುನಾಥ್, ಉದ್ಯಮಿ ಪಾಮೇನಹಳ್ಳಿ ಗೌಡರ ಮಂಜುನಾಥ್, ಕಾವೇರಿ ಬೇಕರಿ ಮಾಲಿಕ ರವಿಚಂದ್ರ, ಸಮಿತಿಯ ಪದಾಧಿಕಾರಿಗಳಾದ ಎಲೋದಹಳ್ಳಿ ರವಿಕುಮಾರ್, ಆಲೂರು ಪರಶುರಾಮ, ಹೂವಿನಮಡು ನಾಗರಾಜ್ ಇತರರು ಇದ್ದರು.ತೀರ್ಪುಗಾರರಾಗಿ ಖಾದರ್, ಬಿ.ಎಚ್. ಪ್ರಕಾಶ್ ಮತ್ತು ಉಮೇಶ್ ನಾಯ್ಕ ಕಾರ್ಯನಿರ್ವಹಿಸಿದರು.  ಬಾಕ್ಸ್..  ಮಹಿಳಾ ಸೋಬಾನೆ ಸ್ಪರ್ಧೆ ವಿಜೇತರು  ಚಿತ್ರದುರ್ಗ ಜಿಲ್ಲೆ ಸಿದ್ದಮ್ಮನಹಳ್ಳಿಯ ಇಂದಿರಮ್ಮ ಮತ್ತು ಸಂಗಡಿಗರ ತಂಡ ಪ್ರಥಮ, ಶಿಕಾರಿಪುರ ಅಕ್ಕಮಹಾದೇವಿ ಹವ್ಯಾಸಿ ಮಂಡಳಿ ತಂಡ ದ್ವಿತೀಯ, ಚಿತ್ರದುರ್ಗ ಅಬ್ಬೆನಹಳ್ಳಿಯ ಬಹುಮಾನ ದುರ್ಗಮ್ಮ ಮತ್ತು ಸಂಗಡಿಗರು ತೃತೀಯ ಬಹುಮಾನ ಪಡೆದಿವೆ.