ಜಿಲ್ಲೆ

ಶಿಕ್ಷಣದಲ್ಲಿ ಕಡ್ಡಾಯವಾಗಲಿ ಕಲೆಯ ಕಲಿಕೆ

ರಮೇಶ ಜಹಗೀರದಾರ್

ದಾವಣಗೆರೆ : ಇಂದಿನ ಸಮಾಜದಲ್ಲಿ ಮಾನವೀಯ ಸಂವೇದನೆ ಕಡಿಮೆಯಾಗುತ್ತಿದೆ. ಆದ್ದರಿಂದ ಕಲೆಯ ಕಲಿಕೆಯನ್ನು ಎಲ್ಲ ಸ್ತರದ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸುವ ಅಗತ್ಯವಿದೆ ಎಂದು ದಾವಣಗೆರೆ ವಿವಿಯ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹಾಂತೇಶ ಪಾಟೀಲ ಹೇಳಿದರು.
 ದಾವಣಗೆರೆ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಮತ್ತು ದೃಶ್ಯಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಏರ್ಪಡಿಸಿರುವ ಭಿತ್ತಿಚಿತ್ರ ಕಲಾ ಶಿಬಿರದ ಅಂಗವಾಗಿ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರತಿಭೆ ಮತ್ತು ಕಲಾಭಿವ್ಯಕ್ತಿ’ ವಿಷಯದ ಕುರಿತು ಮಾತನಾಡಿದರು.
 ಪ್ರತಿಭೆ ಎಲ್ಲರಲ್ಲೂ ಇರುತ್ತದೆಯಾದರೂ ಕವಿ, ಕಲಾವಿದರ ಪ್ರತಿಭೆಗೂ ಸಾಮಾನ್ಯರ ಪ್ರತಿಭೆಗೂ ವ್ಯತ್ಯಾಸವಿದೆ. ಸಾಮಾನ್ಯರಲ್ಲಿ ಪ್ರತಿಭೆ ಉದಯಿಸಿದ ಕೆಲವೆ ಕ್ಷಣದಲ್ಲಿ ಅದೃಶ್ಯವಾಗುತ್ತದೆ. ಆದರೆ ಕವಿ, ಕಲಾವಿದರ ಪ್ರತಿಭೆ ಬಹಳ ಸಮಯದ ವರೆಗೆ ತೀವ್ರವಾಗಿರುತ್ತದೆ. ಕವಿ, ಕಲಾವಿದರಲ್ಲಿ ಮಾನವೀಯ ಸಂವೇದನಾಶೀಲತೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎಂದರು.
 ಸಂಗೀತಗಾರ, ನಾಟಕಕಾರ ರಾಷ್ಟ್ರೀಯ ಪ್ರಶಸ್ತಿ ಪಡೆದರೆ ದೊಡ್ಡ ಸುದ್ದಿಯಾಗುತ್ತದೆ. ಆದರೆ ದೃಶ್ಯ ಕಲಾವಿದರ ವಿಷಯದಲ್ಲಿ ಆ ರೀತಿ ಆಗುವುದಿಲ್ಲ. ಈ ತಾರತಮ್ಯ ಹೋಗಬೇಕು ಎಂದು ಅಭಿಪ್ರಾಯಪಟ್ಟರು.
 ಎವಿಕೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಣಧೀರ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಸಾಮಾಜಿಕ, ರಾಜಕೀಯ ಅವ್ಯವಸ್ಥೆ, ದುರವಸ್ಥೆ ವಿರುದ್ಧ ಹೋರಾಡುವ ಮನೋಬಲ ಇಲ್ಲವಾಗಿದ್ದು, ಇದು ಭವಿಷ್ಯದ ಭಾರತಕ್ಕೆ ಅಪಾಯಕಾರಿ ಎಂದು ತಿಳಿಸಿದರು.
 ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ಡಿ.ಎಚ್. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರ ಮಾರ್ಗದರ್ಶನ ಅಲಕ್ಷೃ ಮಾಡದೆ ಸರಿಯಾಗಿ ಅವುಗಳನ್ನು ಅನುಸರಿಸಿ, ಗುರಿ ತಲುಪಲು ಸತತವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
 ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಸತೀಶ ಕುಮಾರ್ ವಲ್ಲೇಪುರೆ, ಎನ್‌ಎಸ್‌ಎಸ್ ಶಿಬಿರದ ಸಹ ಶಿಬಿರಾಧಿಕಾರಿ ಡಾ. ಗಿರೀಶ್ ಕುಮಾರ್ ಇದ್ದರು.
 ಬೋಧನಾ ಸಹಾಯಕರಾದ ಡಾ.ಸಂತೋಷ ಕುಮಾರ್ ಕುಲಕರ್ಣಿ, ದತ್ತಾತ್ರೇಯ ಭಟ್ಟ, ಶಿವಶಂಕರ್ ಸುತಾರ್, ಹರೀಶ್ ಹೆಡ್ನವರ್, ರಂಗನಾಥ್ ಕುಲಕರ್ಣಿ, ನವೀನ್ ಕುಮಾರ್, ಅರುಣ್ ಕುಮಾರ್, ಕೆ.ವಿ. ಪ್ರಮೋದ್ ಪಾಲ್ಗೊಂಡಿದ್ದರು. ಶೃತಿ ರಾಯ್ಕರ್ ನಿರೂಪಿಸಿದರು. ಶಾರದಾ ಜಾವಗಲ್ ಪ್ರಾರ್ಥಿಸಿದರು. ಶಂಕರಪ್ಪ ಸ್ವಾಗತಿಸಿದರು. ವಿಠ್ಠಲ ವಂದಿಸಿದರು. ಗಿರೀಶ್ ವರದಿ ವಾಚಿಸಿದರು.