ದಾವಣಗೆರೆ : ವಿಜಯವಾಣಿ ಉಪ ಸಂಪಾದಕ ಪಿ. ಬಸವರಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಟೈಲ್ಸ್ ಕೆಲಸ ಮಾಡುವ ಮೈಲಾರಿ, ಕೂಲಿ ಕಾರ್ಮಿಕ ಬಿ. ಪೃಥ್ವಿ ನಾಯ್ಕ, ದ್ವಿತೀಯ ಪಿಯುಸಿ ವಿದ್ಯಾರ್ಥಿ ಎನ್. ಸಂಜಯ್, ಬಿ.ಕಾಂ ವ್ಯಾಸಂಗ ಮಾಡುವ ವೀರೇಶ್ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ಜತೆಯಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೂ ಇದ್ದಾನೆ.
ಇವರೆಲ್ಲರೂ ನಗರದ ಭಾರತ್ ಕಾಲನಿ ನಿವಾಸಿಗಳಾಗಿದ್ದು, ಆರೋಪಿಗಳಿಂದ ಮೊಬೈಲ್ ಫೋನ್, 50 ರೂ. ನಗದು ಹಣ, ಕೃತ್ಯಕ್ಕೆ ಬಳಸಿದ್ದ 2 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
...
* ಒಟ್ಟು 3 ಪ್ರಕರಣ ಪತ್ತೆ
ಆರೋಪಿಗಳು 5 ದಿನಗಳ ಹಿಂದೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಸರ್ವೀಸ್ ರಸ್ತೆಯಲ್ಲಿ ಒಬ್ಬ ವ್ಯಕ್ತಿಗೆ ಹೆದರಿಸಿ 1 ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡಿದ್ದರು.
ಮತ್ತೊಂದು ಪ್ರಕರಣದಲ್ಲಿ 3 ದಿನಗಳ ಹಿಂದೆ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಆವರಗೆರೆ ಹತ್ತಿರ ಹಳೇ ಪಿಬಿ ರಸ್ತೆಯಲ್ಲಿ ಒಬ್ಬ ವ್ಯಕ್ತಿಯನ್ನು ಅಡ್ಡಗಟ್ಟಿ ಒಂದು ಮೊಬೈಲ್ ಕಸಿದುಕೊಂಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಪ್ರಕರಣಗಳ ಸಂಬಂಧ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು 3 ಪ್ರಕರಣಗಳು ಪತ್ತೆಯಾಗಿವೆ.
ಗುರುವಾರ ರಾತ್ರಿ ಬಾತಿ ಕೆರೆಯ ಬಳಿ ಬಸವರಾಜ್ ಅವರ ಬೈಕ್ ಅಡ್ಡಗಟ್ಟಿದ ಆರೋಪಿಗಳು ಹಲ್ಲೆ ನಡೆಸಿ ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ್ ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
...
* ಮೋಜಿಗಾಗಿ ದುಷ್ಕೃತ್ಯ
ತಮ್ಮ ಮೋಜಿಗಾಗಿ ಹಣ ಹೊಂದಿಸಲು ಆರೋಪಿಗಳು ಇಂಥ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ಅವರು ಸಿಸಿ ಟಿವಿ ಇಲ್ಲದ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಇ.ವೈ. ಕಿರಣ್ ಕುಮಾರ್, ಪಿಎಸ್‌ಐ ಜೋವಿತ್‌ರಾಜ್, ಡಿಸಿಐಬಿ ವಿಭಾಗದ ಸಿಬ್ಬಂದಿ ಮಜೀದ್, ರಾಘವೇಂದ್ರ, ಆಂಜನೇಯ, ಬಾಲರಾಜ, ಗ್ರಾಮಾಂತರ ಠಾಣೆಯ ದೇವೇಂದ್ರ ನಾಯ್ಕ, ಅಣ್ಣಯ್ಯ, ಮಹಮ್ಮದ್ ಯುಸುಫ್ ಅತ್ತಾರ್ ಮತ್ತು ವೀರೇಶ್ ಕಾರ್ಯಾಚರಣೆ ನಡೆಸಿದರು.
...
(ಕೋಟ್)
ಬಸವರಾಜ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿತ್ತು. ನಮ್ಮ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಮಾ ಪ್ರಶಾಂತ್, ಎಸ್ಪಿ ದಾವಣಗೆರೆ
...