ಜಿಲ್ಲೆ

ಅಡಕೆ ಮಾರಕವಲ್ಲವೆಂದು ದೃಢಪಡಿಸಬೇಕು

ರಮೇಶ ಜಹಗೀರದಾರ್

ಚನ್ನಗಿರಿ : ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಕ್ಯಾನ್ಸರ್‌ಕಾರಕ ಎಂಬ ವರದಿ ನೀಡಿದೆ. ಅಡಕೆ ಕ್ಯಾನ್ಸರ್‌ಕಾರಕ ಅಲ್ಲವೆಂದು ವಿಶ್ವ ನ್ಯಾಯಾಲಯದಲ್ಲಿ ದೃಢಪಡಿಸಬೇಕಾಗಿದೆ. ಸಂಸ್ಥೆ ನೀಡಿರುವ ವರದಿ ತಪ್ಪು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.  ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಭಾನುವಾರ ಲಿಂಗೈಕ್ಯ ಶ್ರೀ ಸಂಗಮನಾಥ ಮಹಾಸ್ವಾಮಿಗಳ 63ನೇ, ಶ್ರೀ ಚನ್ನಬಸವ ಮಹಾಸ್ವಾಮಿಗಳ 18ನೇ ವರ್ಷದ ಸ್ಮರಣೋತ್ಸವ ಮತ್ತು ಬಸವತತ್ವ ಸಮ್ಮೇಳನ ಪ್ರಯುಕ್ತ ಹಮ್ಮಿಕೊಂಡಿದ್ದ ರೈತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.    ಶಿವಮೊಗ್ಗದಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶಕ್ಕೆ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ಸಿಂಗ್ ಚೌವಾಣ್ ಅವರು ಬಂದಾಗ ಪ್ರಮುಖ ಎರಡು ನಿರ್ಣಯ ಕೈಗೊಳ್ಳಲಾಗಿದೆ. ಸಂಪ್ರದಾಯಕವಾಗಿ ಬಂದಿರುವ ಎಲೆ ಅಡಕೆಯನ್ನು ಕ್ಯಾನ್ಸರ್‌ಗೆ ಹೋಲಿಸುವುದು ಸರಿಯಲ್ಲ. ಈ ಬಗ್ಗೆ ತಜ್ಞರ ತಂಡದಿಂದ ಸಂಶೋಧನೆ ನಡೆಸಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು  ನಿರ್ಣಯಿಸಲಾಗಿದೆ ಎಂದು ತಿಳಿಸಿದರು.  ವಿದೇಶದಿಂದ ಬರುತ್ತಿರುವ ಅಡಕೆಗೆ ಕಡಿವಾಣ ಹಾಕಿ ಭಾರತದ ಅಡಕೆಯನ್ನು ಹೆಚ್ಚು ರಫ್ತು ಮಾಡುವಂತೆ ಮತ್ತು ಅಕ್ರಮವಾಗಿ ದೇಶಕ್ಕೆ ಬರುತ್ತಿರುವ ಅಡಕೆ ಸಂಪೂರ್ಣ ನಿಯಂತ್ರಿಸಬೇಕು. ರೈತರು ಕೊಡುವ ಅಡಕೆಯಲ್ಲಿ ಶೇ.12 ರಷ್ಟು ತೇವಾಂಶ ಇದ್ದರು ಸಹ  ಮಾರುಕಟ್ಟೆಯಲ್ಲಿ ಖರೀದಿಸಬೇಕು ಎಂಬ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದರು.  ಗೋಮಾತೆಯನ್ನು ಪೂಜಿಸುವ ನಾಡಿನಲ್ಲಿ ಕೆಚ್ಚಲನ್ನು ಕತ್ತರಿಸುವ ವಿಕೃತ ಮನಸ್ಥಿತಿಗಳ ವಿರುದ್ಧ ಹಿಂದು ಸಮಾಜ ಸಂಘಟಿತ ಹೋರಾಟ ನಡೆಸಬೇಕಾಗಿದೆ. ಸನಾತನ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ತಾಯಂದಿರು ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿಸಬೇಕು ಎಂದು ಹೇಳಿದರು.  ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಸರ್ವರೂ ಸಮಾನರು ಎಂದು ನಾಡಿಗೆ ಬೋಧನೆ ಮಾಡಿದವರೇ 12ನೇ ಶತಮಾನದ ಶರಣರು. ಪ್ರಸ್ತುತ ದಿನಗಳಲ್ಲಿ ಬಸವತತ್ವ ಎಂಬುದು ಬಾಯಿಮಾತಿಗೆ ಇದ್ದು, ಜೀವನದಲ್ಲಿ ಅಳವಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು.  ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ, ದೇಶದ ಸಂಸ್ಕೃತಿ ಉಳಿದಿರುವುದು ಮಠ, ಮಂದಿರಗಳಿಂದ. ಗುರು ಪರಂಪರೆ ಇಲ್ಲದಿದ್ದರೆ ನಮ್ಮ ದೇಶ ಯಾವ ದಿಕ್ಕಿನೆಡೆಗೆ ಸಾಗುತ್ತಿತ್ತು ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಅಸಾಧ್ಯವಾಗುತ್ತಿತ್ತು ಎಂದರು.  ವಿಧಾನ ಪರಿಷತ್ ಸದಸ್ಯ ಸಿ. ಪುಟ್ಟಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮನುಷ್ಯನು ಸ್ವಾರ್ಥಿಯಾಗಿದ್ದಾನೆ. ಇದರಿಂದ ಮನುಷ್ಯರ ನಡುವಿನ ಬಾಂಧವ್ಯ ಮಾಯವಾಗುತ್ತಿದೆ. ಬಸವತತ್ವವನ್ನು ಯಾರು ಮೈಗೂಡಿಸಿಕೊಂಡು ಮುನ್ನಡೆಯುತ್ತಾರೋ ಅವರಿಗೆ ಶ್ರೇಯಸ್ಸು, ಯಶಸ್ಸು ಲಭಿಸಲಿದೆ ಎಂದು ಹೇಳಿದರು.  ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಪಾಂಡೋಮಟ್ಟಿ ವಿರಕ್ತಮಠವು ಬಸವತತ್ವವನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಶ್ರೀ ಮಠದ ಗುರುಬಸವ ಸ್ವಾಮಿಗಳು ನಾಡಿನಾದ್ಯಂತ ಸಂಚರಿಸುತ್ತಾ ಬಸವತತ್ವವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದರು.  ಸಾಣೇಹಳ್ಳಿ ಶ್ರೀ ಮತ್ತು ಪಾಂಡೋಮಟ್ಟಿ ಶ್ರೀಗಳು ಮುಂದಿನ ವಾರದಿಂದ ಸಾಣೆಹಳ್ಳಿಯಿಂದ ಸಂತೆಬೆನ್ನೂರುವರೆಗೆ ಸಾವಯವ ಕೃಷಿ, ಪರಿಸರ ಕಾಳಜಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಕೈಗೊಂಡಿದ್ದಾರೆ. ಪಾದಯಾತ್ರೆಗೆ ಶ್ರೀಗಳಿಗೆ ಬೆಂಬಲವಾಗಿ ಭಕ್ತವೃಂದ ಆಗಮಿಸಬೇಕು ಎಂದರು.  ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಶಿರಹಟ್ಟಿ ಭಾವೈಕ್ಯತಾ ಮಹಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಶ್ರೀ. ಸಿದ್ದಯ್ಯನಕೋಟೆಯ ಬಸವಲಿಂಗ ಶ್ರೀ, ಹಿಮ್ಮಡಿ ಮಹಾಂತೇಶ ಶ್ರೀ, ಬಸವಯೋಗಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಬಸವತತ್ವ ಚಿಂತಕಿ ಡಿ. ಶಬ್ರಿನಾ ಮಹಮ್ಮದ್ ಅನುಭಾವ ವಾಣಿ ನುಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಷಡಾಕ್ಷರಿ, ಡಿ.ಎಸ್. ಪ್ರವೀಣ್, ಮಾಡಾಳು ಮಲ್ಲಿಕಾರ್ಜುನ್, ಕಾಕನೂರು ಎಂ.ಬಿ. ನಾಗರಾಜ್ ಸೇರಿ ಇತರರಿದ್ದರು.