ಜಿಲ್ಲೆ

ಗುರು ರಾಯರ ಆರಾಧನಾ ಮಹೋತ್ಸವ ಸುಸಂಪನ್ನ

ದಾವಣಗೆರೆ : ಉತ್ತರಾರಾಧನೆಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವ ಮೂಲಕ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂರು ದಿನಗಳ ಆರಾಧನಾ ಮಹೋತ್ಸವ ಜಿಲ್ಲೆಯಲ್ಲಿ ಶನಿವಾರ ಸುಸಂಪನ್ನವಾಯಿತು.
 ನಗರದ ಕೆ.ಬಿ. ಬಡಾವಣೆ ರಾಯರ ಮಠದಿಂದ ರಾಜ ಬೀದಿಗಳಲ್ಲಿ ಮಹಾ ರಥೋತ್ಸವ ನಡೆಯಿತು. ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಪಿ.ಬಿ. ರಸ್ತೆ, ಲಾಯರ್ ರಸ್ತೆ ಮಾರ್ಗವಾಗಿ ಜಯದೇವ ವೃತ್ತವನ್ನು ತಲುಪಿ ಅಲ್ಲಿಂದ ಮಠಕ್ಕೆ ವಾಪಸಾಯಿತು. ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದೊಂದಿಗೆ ರಥೋತ್ಸವ ಸಾಗಿತು. ಭಜನೆ, ನಾದಸ್ವರ ಇನ್ನಿತರ ವಾದ್ಯಗಳು, ಯುವಕರ ನರ್ತನ ಗಮನ ಸೆಳೆದವು.
 ಮಠದ ಅಧ್ಯಕ್ಷ ಕೊ.ಸ. ಪ್ರಸನ್ನಾಚಾರ್, ನರಗನಹಳ್ಳಿ ಸುಬ್ರಹ್ಮಣ್ಯ, ವಾಗೀಶಾಚಾರ್, ವಾಚಸ್ಪತಿ ಆಚಾರ್, ಕಡೂರು ಪ್ರಾಣೇಶಾಚಾರ್, ಸಿ.ಕೆ. ಆನಂದ ತೀರ್ಥಾಚಾರ್, ಕಂಪ್ಲಿ ಗುರುರಾಜಾಚಾರ್ ಪಾಲ್ಗೊಂಡಿದ್ದರು.
 ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಫಲ ಪಂಚಾಮೃತ, ಶ್ರೀ ಹರಿವಾಯು ಸ್ತುತಿ ಪಾರಾಯಣ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ, ಸತ್ಯನಾರಾಯಣ ಪೂಜೆ, ಪಾದಪೂಜೆ ನೆರವೇರಿದವು.
 ಪಿ.ಜೆ. ಬಡಾವಣೆ ರಾಯರ ಮಠದಲ್ಲಿ ಸುಬ್ಬಣ್ಣಾಚಾರ್ ವಡೇರ್ ಅವರ ಪೌರೋಹಿತ್ಯದಲ್ಲಿ ಕೆ.ಎಸ್.ಎಫ್.ಸಿ ನಾಗರಾಜ್, ಆಶಾ, ಸುಶಮೀಂದ್ರ ಅವರ ಉಪಸ್ಥಿತಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
 ಬೆಳಗ್ಗೆ ಮಠದಲ್ಲಿ ವೃಂದಾವನದ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ, ಪುಷ್ಪಾಲಂಕಾರ ಹಾಗೂ ಅಷ್ಟೋತ್ತರ ಪಾರಾಯಣ ನೆರವೇರಿದವು.