ಜಿಲ್ಲೆ

ಜಾನುವಾರುಗಳಿಗೆ ಸಮತೋಲನ ಆಹಾರ ಮುಖ್ಯ

ರಮೇಶ ಜಹಗೀರದಾರ್

ದಾವಣಗೆರೆ : ಜಾನುವಾರುಗಳಲ್ಲಿ ಉತ್ತಮ ಆರೋಗ್ಯಕ್ಕೆ ಸಮತೋಲನ ಖನಿಜಾಂಶವುಳ್ಳ ಆಹಾರ ಮುಖ್ಯ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪಶುವಿಜ್ಞಾನ ತಜ್ಞ ಡಾ.ಜಿ.ಕೆ. ಜಯದೇವಪ್ಪ ಹೇಳಿದರು.  ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಜಗಳೂರು ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಪ. ಪಂಗಡದ ಉಪಯೋಜನೆಯಲ್ಲಿ ಬಸಪ್ಪನಹಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಂತು ನಿವಾರಣಾ ಹಾಗೂ ಜಾನುವಾರು ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.  ದೇಹದ ತೂಕಕ್ಕೆ ಅನುಸಾರ ಪೋಷಕಾಂಶ ಪೂರೈಸುವುದು ಬಹಳ ಮುಖ್ಯ. ಗರ್ಭ ಧರಿಸುವಿಕೆ, ಉತ್ತಮ ಹಾಲಿನ ಇಳುವರಿ, ಗುಣಮಟ್ಟದ ಕರುಗಳ ಪಾಲನೆ ಪಶುಪಾಲನೆಯಲ್ಲಿ ಪ್ರಮುಖ ಹಂತಗಳು. ಇವುಗಳ ಬಗ್ಗೆ ಪಶುಪಾಲಕರು ಗಮನ ಹರಿಸಬೇಕು ಎಂದು ತಿಳಿಸಿದರು.  ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಮಾತನಾಡಿ, ಬಸಪ್ಪನಹಟ್ಟಿ ಮತ್ತು ಕಲ್ಲೇದೇವರಪುರ ಗ್ರಾಮದಲ್ಲಿ ಪ. ಪಂಗಡ ಉಪಯೋಜನೆಯಡಿ ರೈತರಿಗೆ ಉತ್ತಮ ಗುಣಮಟ್ಟದ ಈರುಳ್ಳಿ ಬೀಜ, ಧಾನ್ಯ ಶೇಖರಣೆಯಲ್ಲಿ ರಾಸಾಯನಿಕ ರಹಿತ ಸಾಧನದ ಬಳಕೆ, ಪೌಷ್ಠಿಕ ಕೈತೋಟ ಮುಂತಾದ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.  ಜಗಳೂರು ತಾಲೂಕು ಸಹಾಯಕ ಪಶು ನಿರ್ದೇಶಕ ಡಾ. ಲಿಂಗರಾಜ್ ಮಾತನಾಡಿ, ಇಲಾಖೆಯಿಂದ ಮೇವಿನ ಬೀಜದ ಕಿಟ್ ಮತ್ತು ರಾಸುಗಳಿಗೆ ಉತ್ತಮ ಲಸಿಕಾ ಶಿಬಿರ ಒದಗಿಸುತ್ತಿದ್ದು ರೈತರು ಇದರ ಸದುಪಯೋಗ ಪಡೆಯಬೇಕೆಂದರು.  ಗ್ರಾಮದ 130ಕ್ಕೂ ಹೆಚ್ಚು ರಾಸುಗಳಿಗೆ ಜಂತುಹುಳ ನಿವಾರಣಾ ಔಷಧಿ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಪಶು ವೈದ್ಯಾಧಿಕಾರಿಗಳಾದ ಡಾ. ಜಿ.ಕೆ.ಜಯದೇವಪ್ಪ, ಡಾ. ವೀರೇಶ್, ಡಾ.ಚೇತನ್ ನೆರವೇರಿಸಿದರು.