ದಾವಣಗೆರೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿಲ್ಲ ಎನ್ನುವ ಮಾತು ವ್ಯಾಪಕವಾಗಿ ಕೇಳಿಬಂದಿದೆ. ದಾವಣಗೆರೆ ಜಿಲ್ಲೆಗೂ ಈ ಮಾತು ಅನ್ವಯಿಸುತ್ತದೆ. ಮಧ್ಯ ಕರ್ನಾಟಕದ ಜನರ ನಿರೀಕ್ಷೆಗಳು ಬಹಳ ಇದ್ದವು, ಆದರೆ ಮುಂಗಡ ಪತ್ರದ ಪುಟಗಳಲ್ಲಿ ಅವುಗಳ ಬಗ್ಗೆ ಪ್ರಸ್ತಾಪ ಕಂಡುಬಂದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಚಿತ್ರದುರ್ಗದ ಜತೆಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಜನರೂ ಬಹಳಷ್ಟು ಕನಸು ಕಂಡಿದ್ದಾರೆ. ಯೋಜನೆಗೆ ಹಣ ಬಿಡುಗಡೆಯಾಗುತ್ತದೆ, ಅದರಿಂದ ನಮ್ಮ ಭಾಗ ಮುಂಬರುವ ದಿನಗಳಲ್ಲಿ ಸಮೃದ್ಧ ನೀರು ಮತ್ತು ಹಸಿರಿನಿಂದ ನಳನಳಿಸುತ್ತದೆ ಎನ್ನುವ ಆಸೆ ಇಟ್ಟುಕೊಂಡಿದ್ದಾರೆ. ಕಳೆದ ಬಾರಿಯ ಬಜೆಟ್‌ನಲ್ಲಿ ಈ ಯೋಜನೆಗೆ 5300 ಕೋಟಿ ರೂ. ಘೋಷಣೆ ಮಾಡಲಾಗಿತ್ತು. ಈ ಬಾರಿ ಅದರ ಬಗ್ಗೆ ಪ್ರಸ್ತಾಪವಾಗಲಿ, ಯೋಜನೆಯ ಭವಿಷ್ಯದ ಬಗ್ಗೆ ಚರ್ಚೆಯಾಗಲಿ ಆದಂತಿಲ್ಲ. ಇದರಿಂದ ಸಹಜವಾಗಿಯೇ ಈ ಭಾಗದ ರೈತರಿಗೆ ನಿರಾಸೆಯಾಗಿದೆ. ವ್ಯಾಪಾರ, ವಾಣಿಜ್ಯ, ಶಿಕ್ಷಣ ಸಂಸ್ಥೆಗಳಿಗೆ ಪ್ರಸಿದ್ಧವಾಗಿರುವ ದಾವಣಗೆರೆಗೆ ವಿಮಾನ ನಿಲ್ದಾಣ ಆಗಬೇಕು ಎಂಬ ಬೇಡಿಕೆ ಹಳೆಯದು. ಈ ಹಿಂದೆ ಯೋಜನೆಯ ಕಾರ್ಯಸಾಧ್ಯತಾ ವರದಿ ಬಂದಿದ್ದು ಬಿಟ್ಟರೆ ಹೆಚ್ಚಿನ ಪ್ರಗತಿ ಆಗಿಲ್ಲ. ಈ ಬಾರಿಯ ಮುಂಗಡಪತ್ರದಲ್ಲೂ ವಿಮಾನ ನಿಲ್ದಾಣಕ್ಕೆ ರೆಕ್ಕೆ ಮೂಡಿದಂತಿಲ್ಲ. ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಎಷ್ಟು ಹಣವನ್ನು ಇಡಲಾಗಿದೆ ಎನ್ನುವುದು ಒಂದೆರಡು ದಿನಗಳಲ್ಲಿ ‘ಪಿಂಕ್ ಬುಕ್’ನಲ್ಲಿ ಗೊತ್ತಾಗಲಿದೆ ಎನ್ನುತ್ತವೆ ಮೂಲಗಳು. ದಾವಣಗೆರೆ ಅಥವಾ ಹರಿಹರ ರೈಲು ನಿಲ್ದಾಣಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆಯೆ ಎನ್ನುವ ಬಗ್ಗೆಯೂ ತಿಳಿಯಲಿದೆ. ಒಂದು ಕಾಲಕ್ಕೆ ‘ಕರ್ನಾಟಕದ ಮ್ಯಾಂಚೆಸ್ಟರ್’ ಎನಿಸಿದ್ದ ಜಿಲ್ಲೆಯಲ್ಲಿ ಈಗ ಹೇಳಿಕೊಳ್ಳುವಂಥ ದೊಡ್ಡ ಕೈಗಾರಿಕೆಗಳಿಲ್ಲ. ಆ ನಿರ್ವಾತವನ್ನು ತುಂಬುವ ಪ್ರಯತ್ನ ಆಗಬೇಕು ಎನ್ನುವುದು ಜನರ ನಿರೀಕ್ಷೆಯಾಗಿದೆ. ಜಿಲ್ಲೆಯ ವಿದ್ಯಾವಂತ ಯುವಕರು ಉದ್ಯೋಗ ಅರಸಿ ಬೆಂಗಳೂರು ಇನ್ನಿತರ ದೊಡ್ಡ ನಗರಗಳಿಗೆ ತೆರಳಬೇಕಾಗಿದೆ. ಸ್ಥಳೀಯವಾಗಿಯೇ ಕಾರ್ಖಾನೆಗಳು ಆರಂಭವಾದರೆ ಇಲ್ಲಿಯೇ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನೇರ ಘೋಷಣೆಗಳು ಆದಂತೆ ತೋರುತ್ತಿಲ್ಲ. ಕೈಗಾರಿಕಾ ಕಾರಿಡಾರ್, ವಿಶೇಷ ಆರ್ಥಿಕ ವಲಯ, ಫುಡ್‌ಪಾರ್ಕ್, ಕೃಷಿ ಆಧಾರಿತ ಉದ್ಯಮಗಳು, ಐಟಿ ಬಿಟಿ ಪಾರ್ಕ್ ಬರಬೇಕು. ಹೀಗೆ ಅನೇಕ ನಿರೀಕ್ಷೆಗಳು ಜಿಲ್ಲೆಯ ಜನರಿಗೆ ಇವೆಯಾದರೂ ಬಜೆಟ್‌ನಲ್ಲಿ ಅವುಗಳ ಬಗ್ಗೆ ಏನನ್ನೂ ಹೇಳಿದಂತಿಲ್ಲ. ಆದರೆ ದೇಶದಲ್ಲಿ ಸಾರ್ವತ್ರಿಕವಾಗಿ ಅನ್ವಯಿಸುವ ವಿವಿಧ ಯೋಜನೆಗಳ ಪರೋಕ್ಷ ಲಾಭವಂತೂ ಸಿಗಲಿದೆ.