ದಾವಣಗೆರೆ: ದಾವಣಗೆರೆ ಮೂಲದ ಇಂಜಿನಿಯರ್ ದಂಪತಿ ಹಾಗೂ ಮಗು ಸಾವಿನ ಪ್ರಕರಣದ ಬಗ್ಗೆ ಅಮೆರಿಕ ಸರ್ಕಾರ ತನಿಖೆ ಆರಂಭಿಸಿದ್ದು ಮರಣೋತ್ತರ ಪರೀಕ್ಷಾ ವರದಿ ಬಳಿಕವೇ ಶವಗಳ ಹಸ್ತಾಂತರ ಸೇರಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅಲ್ಲಿನ ಭಾರತದ ರಾಯಭಾರಿ ಕಚೇರಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ಅಮೆರಿಕದ ಪೊಲೀಸರು ಮತ್ತು ವಾಷಿಂಗ್ಟನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಯೋಗೇಶ್ ಅವರ ಸಹೋದರ ಪುನೀತ್ ಜತೆಗೆ ಸಂಪರ್ಕದಲ್ಲಿದ್ದಾರೆ.
ಮುಂದಿನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು, ಆ ದೇಶದ ಡೆಲವೇರ್ ರಾಜ್ಯದ ನಿವಾಸಿಯಾಗಿರುವ ತಮ್ಮ ರಕ್ತ ಸಂಬಂಧಿ ಸೋಮಶೇಖರ್ ಅವರಿಗೆ ಪುನೀತ್ ಜವಾಬ್ದಾರಿ ವಹಿಸಿದ್ದಾರೆ ಎಂದು ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.
...