ಜಿಲ್ಲೆ

ನನಸಾಗಲಿ ಸಮ ಸಮಾಜದ ಕನಸು

ರಮೇಶ ಜಹಗೀರದಾರ್

ದಾವಣಗೆರೆ : ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಸಮ ಸಮಾಜ ಕಟ್ಟಲು ನಾವೆಲ್ಲ ಕೈಜೋಡಿಸಬೇಕಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಾಲಿಕೆ ಆವರಣದ ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸಮಾನತೆ, ಶೋಷಣೆ ಅನುಭವಿಸಿದರು. ಅವರು ನಂತರ ಸಂವಿಧಾನ ಎಂಬ ದೊಡ್ಡ ಕೊಡುಗೆಯನ್ನೇ ನೀಡಿದರು. ಅಂಥ ಸಂವಿಧಾನದ ಬಗ್ಗೆ ಜಾಗೃತಿ ಮೂಡಬೇಕು. ಅದರ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.  ಅಂಬೇಡ್ಕರ್ ಅವರು ವಿದೇಶದಲ್ಲಿ ವ್ಯಾಸಂಗ ಮಾಡಿ ಜ್ಞಾನ ಪಡೆಯುವ ಜತೆಗೆ ನಾಯಕತ್ವ ಗುಣಗಳನ್ನೂ ಮೈಗೂಡಿಸಿಕೊಂಡರು. ಮಹಿಳಾ ಶಿಕ್ಷಣದ ಪರವಾಗಿ ಧ್ವನಿ ಎತ್ತಿದರು ಎಂದು ಸ್ಮರಿಸಿದರು.  ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಮಾತನಾಡಿ, ಅಂಬೇಡ್ಕರ್ ಅವರು ಶೋಷಣೆಯನ್ನು ಅನುಭವಿಸಿ ಅದಕ್ಕೆ ಉತ್ತರ ನೀಡಿದರು ಎಂದರು. ಜಿ.ಪಂ. ಸಿಇಒ ಡಾ. ಸುರೇಶ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಸಮಾಜಕಲ್ಯಾಣ ಅಧಿಕಾರಿ ನಾಗರಾಜ, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ, ಮುಖಂಡ ಮಲ್ಲೇಶ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.  ...  (ಬಾಕ್ಸ್)  ಪೌರ ಕಾರ್ಮಿಕರಿಂದ ಹಣ ವಸೂಲಿ  ರಾಜ್ಯದಲ್ಲಿ ಪೌರ ಕಾರ್ಮಿಕರ ಸೇವೆ ಕಾಯಂ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ ಬೆನ್ನಲ್ಲೇ, ಇದೇ ವಿಷಯವನ್ನಿಟ್ಟುಕೊಂಡು ಕೆಲವು ಮಧ್ಯವರ್ತಿಗಳು ಹಣ ಮಾಡಲು ಹೊರಟಿದ್ದಾರೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆರೋಪಿಸಿದರು.  ಸೇವೆ ಕಾಯಂ ಮಾಡಿಸಿಕೊಡುತ್ತೇವೆ ಎಂದು ಹೇಳಿಕೊಂಡು ಪೌರ ಕಾರ್ಮಿಕರಿಗೆ 2 ರಿಂದ 5 ಲಕ್ಷ ರೂ.ಗಳ ಬೇಡಿಕೆ ಇಡುತ್ತಿದ್ದಾರೆ. ಈ ಬೆಳವಣಿಗೆಯನ್ನು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ತಡೆಯಬೇಕು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.  ಸಿಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೆ ತರಲು ಬದ್ಧರಿದ್ದಾರೆ. ಒಳ ಮೀಸಲಾತಿ ಜಾರಿಗೆ ಬರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದರು.  ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಆದ್ದರಿಂದ ಅಂಬೇಡ್ಕರ್ ಪ್ರಶಸ್ತಿಯನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲ ಸಮುದಾಯಗಳಿಗೂ ಸಿಗುವಂತಾಗಬೇಕು ಎಂದರು.