ದಾವಣಗೆರೆ: ಅತಿಥಿ ಉಪನ್ಯಾಸಕರ ಸಮಸ್ಯೆ ಹಾಗೂ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಬಗೆಹರಿಸಲು ಒತ್ತಾಯಿಸಿ ಎಐಡಿಎಸ್‌ಒ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಯದೇವ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಆನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅಥಿತಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ತರಗತಿ ಬಹಿಷ್ಕರಿಸಿ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕಾಲೇಜುಗಳಲ್ಲಿ ಬಹುತೇಕ ತರಗತಿಗಳು ಸ್ಥಗಿತಗೊಂಡಿವೆ ಎಂದು ದೂರಿದರು.
ಕಾಲೇಜುಗಳಲ್ಲಿ ಒಂದೆಡೆ ತರಗತಿ ನಡೆಯುತ್ತಿಲ್ಲ ಮತ್ತೊಂದೆಡೆ ಸೆಮಿಸ್ಟರ್ ಪರೀಕ್ಷೆ ಸಮೀಪಿಸುತ್ತಿದ್ದು, ಇದು ಶೈಕ್ಷಣಿಕ ನಷ್ಟ ಅನುಭವಿಸುತ್ತಿರುವ ವಿದ್ಯಾರ್ಥಿಗಳನ್ನು ಸಾಕಷ್ಟು ಆತಂಕಕ್ಕೆ ತಳ್ಳಿದೆ. ಯಾವುದೇ ಶಿಕ್ಷಣ ನೀತಿ ಹಾಗೂ ಸಮಸ್ಯೆಗಳಿಗೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಕೂಡಲೇ ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಶೀಲಿಸಿ ಅವರಿಗೆ ನ್ಯಾಯ ಒದಗಿಸಬೇಕು. ಕಾಲೇಜುಗಳಲ್ಲಿ ಪಾಠಗಳು ಸರಿಯಾಗಿ ನಡೆಯುವ ನಿಟ್ಟಿನಲ್ಲಿ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯೆ ಎ. ಧನುಷಾ, ವಿನಯ್, ರವಿ, ವೇದ, ಈಶ್ವರಿ, ಪ್ರಿಯಾಂಕಾ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.