ದಾವಣಗೆರೆ : ಬದಲಾವಣೆಯ ಈ ಕಾಲ ಘಟ್ಟದಲ್ಲಿ ಸಂವಿಧಾನದ ಮೌಲ್ಯಗಳನ್ನು ವಕೀಲರು ಎತ್ತಿ ಹಿಡಿಯಬೇಕು ಎಂದು ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ವಿನಯ್ ಬಾಳಾಸಾಹೇಬ್ ಮಾಂಗಳೇಕರ್ ಹೇಳಿದರು. ಜಿಲ್ಲಾ ವಕೀಲರ ಸಂಘದಿಂದ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾನೂನು ಕ್ಷೇತ್ರ ಇತ್ತೀಚೆಗೆ ಬಹಳಷ್ಟು ಬದಲಾಗಿದೆ. ಕೃತಕ ಬುದ್ಧಿಮತ್ತೆಯಿಂದ ಪರಿವರ್ತನೆಯನ್ನು ಕಾಣುತ್ತಿದ್ದೇವೆ. ಇದು ನಮ್ಮ ವೃತ್ತಿಗೆ ಸಹಕಾರಿಯಾಗಿದೆ. ಇದನ್ನು ಬಳಸಿಕೊಂಡು ನಮ್ಮ ನೈತಿಕತೆ ಮರೆಯದೇ ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ರಚನಾಕಾರರು. ಅವರ ಕೊಡುಗೆ ದೊಡ್ಡದಿದೆ. ಆದರೂ ಸರ್ವೆಪಲ್ಲಿ ರಾಧಾಕೃಷ್ಣ ಅವರ ವಕೀಲ ವೃತ್ತಿಯಲ್ಲಿನ ದಕ್ಷತೆ ಕಾರಣಕ್ಕೆ ಅವರ ಹೆಸರಲ್ಲಿ ವಕೀಲರ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು. ಯುವ ವಕೀಲರು ಆರಂಭದಲ್ಲೇ ಹಣದ ಹಿಂದೆ ಬೀಳದೇ ವೃತ್ತಿಯಲ್ಲಿ ಮೊದಲು ಪಳಗಬೇಕು. ಮುಂದೆ ದುಡ್ಡು ತಾನಾಗಿಯೇ ಬರುತ್ತದೆ ಎಂದು ಸಲಹೆ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಜಿಲ್ಲಾ ಸಂಘಕ್ಕೆ ರಾಜ್ಯ ಪರಿಷತ್‌ನಿಂದ ನೀಡುವ ಕಾರ್ಯಾಗಾರದ ಅನುದಾನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ನಮ್ಮ ಜಿಲ್ಲಾ ವಕೀಲರ ಸಂಘ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಸಂವಿಧಾನ ರಚನಾ ಕರಡು ಸಮಿತಿಯಲ್ಲಿದ್ದ ಸದಸ್ಯರು ನಮ್ಮ ಸಂಘದವರು ಎಂಬುದು ಹೆಮ್ಮೆಯ ವಿಷಯ ಎಂದರು. ಹಿರಿಯ ವಕೀಲರಾದ ಎ.ಆರ್. ಗುರುಬಸವರಾಜ್, ಲೋಕೀಕೆರೆ ಸಿದ್ದಪ್ಪ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಸೇರಿದಂತೆ ವಿವಿಧ ಪೀಠದ ಜಿಲ್ಲಾ ನ್ಯಾಯಾಧೀಶರು ವೇದಿಕೆಯಲ್ಲಿದ್ದರು. ಜಿಲ್ಲಾ ಸರ್ಕಾರಿ ವಕೀಲರು, ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಎಂ.ಆರ್. ಮಹೇಶ್ವರಪ್ಪ ತಮ್ಮ ಪುಸ್ತಕ ಭಂಡಾರವನ್ನು ಜಿಲ್ಲಾ ನ್ಯಾಯಾಲಯದ ಗ್ರಂಥಾಲಯಕ್ಕೆ ಅರ್ಪಿಸಿದರು. ಎಸ್. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ನ್ಯಾಯಾಲಯ ಸಿಬ್ಬಂದಿ ಅನಿತಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಪ್ರಾರ್ಥಿಸಿದರು. ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ವಂದಿಸಿದರು.