ಜಿಲ್ಲೆ

ಲೋಕ ಅದಾಲತ್‌ನಲ್ಲಿ ಒಂದಾದ 39 ಜೋಡಿ

ರಮೇಶ ಜಹಗೀರದಾರ್

ದಾವಣಗೆರೆ  : ಜಿಲ್ಲೆಯಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 39 ಜೋಡಿಗಳು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದವು.  ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ 33 ಜೋಡಿಗಳು, ಹರಿಹರ ತಾಲೂಕು ನ್ಯಾಯಾಲಯಗಳಲ್ಲಿ 3, ಚನ್ನಗಿರಿ, ಹೊನ್ನಾಳಿ ಮತ್ತು ಜಗಳೂರು ತಾಲೂಕು ನ್ಯಾಯಾಲಯಗಳಲ್ಲಿ ತಲಾ 1 ಪ್ರಕರಣದಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.  ಮರು ಹೊಂದಾಣಿಕೆಯಾದ ಜೋಡಿಗಳಿಗೆ ಗುಲಾಬಿ ಹೂವನ್ನು ನೀಡಿ, ಸಿಹಿ ಹಂಚಿ ಶುಭ ಕೋರಲಾಯಿತು. ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, ಶ್ರೀರಾಮ ನಾರಾಯಣ ಹೆಗಡೆ, ಆರ್.ಎನ್. ಪ್ರವೀಣ್ ಕುಮಾರ್, ಮಹಾವೀರ ಮ.ಕರೆಣ್ಣವರ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಇದ್ದರು.  ...  * ಹತ್ತು ಸಾವಿರ ಪ್ರಕರಣ ಮುಕ್ತಾಯ  ಜಿಲ್ಲೆಯಲ್ಲಿ ಒಟ್ಟು 10,186 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡವು. 1,87,029 ವ್ಯಾಜ್ಯಪೂರ್ವ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾದವು.  ಲೋಕ ಅದಾಲತ್‌ನಲ್ಲಿ 109 ಅಪರಾಧಿಕ ಪ್ರಕರಣ, 148 ಚೆಕ್ ಅಮಾನ್ಯ ಪ್ರಕರಣ, 31 ಬ್ಯಾಂಕ್ ವಸೂಲಾತಿ ಕೇಸ್, 16 ಇತರೆ ಹಣ ವಸೂಲಾತಿ, 47 ಅಪಘಾತ ಪರಿಹಾರ ಪ್ರಕರಣ, 91 ವಿದ್ಯುತ್ ಕಳ್ಳತನದ ಕೇಸ್, 7 ಅಕ್ರಮ ಮರಳು ಗಣಿಗಾರಿಕೆ ಪ್ರಕರಣ, 57 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ, 20 ಭೂ ಸ್ವಾಧೀನ ಪರಿಹಾರ ಜಾರಿ ಅರ್ಜಿಗಳು, 138 ಇತರೆ ಜಾರಿ ಅರ್ಜಿಗಳು, ಹಲವು ಕಾರಣಕ್ಕಾಗಿ ದಾಖಲಿಸಿದ 87 ದಾವೆ, 37 ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು ರಾಜಿ ಮೂಲಕ ಇತ್ಯರ್ಥಗೊಂಡವು.  ಜಿಲ್ಲೆಯಾದ್ಯಂತ 1064 ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರೆ ಅನುಕೂಲತೆಗಳಿಗೆ ಅನುವು ಮಾಡಿಕೊಡಲಾಯಿತು.  ಇತರೆ ವ್ಯಾಜ್ಯಪೂರ್ವ ಪ್ರಕರಣಗಳಾದ ಬ್ಯಾಂಕ್ ಸಾಲ ವಾಸೂಲಾತಿ, ಕಾರ್ಮಿಕ ವ್ಯಾಜ್ಯಗಳು, ನೀರಿನ ಬಾಕಿ ವಸೂಲಾತಿ, ಕಂದಾಯ ಪ್ರಕರಣಗಳು, ಟ್ರಾಫಿಕ್ ಕೇಸ್‌ಗಳು ಇತ್ಯಾದಿ ಸೇರಿದಂತೆ ಒಟ್ಟಾರೆ 1,87,029 ಪ್ರಕರಣಗಳು ಇತ್ಯರ್ಥಗೊಂಡವು.  ...