ಜಿಲ್ಲೆ

ನಾಳೆ ದಾವಣಗೆರೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ

ರಮೇಶ ಜಹಗೀರದಾರ್

ದಾವಣಗೆರೆ : ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರಾರಂಭವಾಗಿರುವ ಬಸವ ಸಂಸ್ಕೃತಿ ಅಭಿಯಾನ ಸೆ. 15ರಂದು ನಗರಕ್ಕೆ ಆಗಮಿಸಲಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಾಮರಸ್ಯದ ನಡೆ ಮತ್ತು ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.  ಬಸವ ಸಂಸ್ಕೃತಿ ಅಭಿಯಾನ ಸೆ. 5ರಂದು ಬಸವಣ್ಣನ ಜನ್ಮಸ್ಥಾನ ಬಸವನ ಬಾಗೇವಾಡಿಯಿಂದ ಆರಂಭವಾಗಿದೆ. ಈಗಾಗಲೇ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ, ಕೊಪ್ಪಳ, ಧಾರವಾಡ ಜಿಲ್ಲೆಗಳಲ್ಲಿ ನಡೆದಿದೆ. ಭಾನುವಾರ ಹಾವೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಸೋಮವಾರ ನಗರಕ್ಕೆ ಆಗಮಿಸಲಿದೆ ಎಂದರು.  ಅಂದು ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ನಡೆಯಲಿದೆ. ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸುವರು. ಡಾ.ಪ್ರಭಾಕರ ಲಕ್ಕೋಳ್ ಭಾಗವಹಿಸುವರು.  ಸಂಜೆ 4.30ಕ್ಕೆ ಮೋತಿ ವೀರಪ್ಪ ಕಾಲೇಜು ಆವರಣದಿಂದ ಸಾಮರಸ್ಯ ನಡಿಗೆ ಆರಂಭವಾಗಿ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಅಂತ್ಯವಾಗಲಿದೆ. ನಂತರ ಅಭಿಯಾನದ ಸಾರ್ವಜನಿಕ ಸಮಾವೇಶ ನಡೆಯಲಿದೆ. ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಅಣಬೇರು ರಾಜಣ್ಣ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಅಥಣಿ ಎಸ್. ವೀರಣ್ಣ, ಚಿಂತಕಿ ಕೆ.ನೀಲಾ ಮಾತನಾಡುವರು ಎಂದರು.  ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ತತ್ವಗಳನ್ನು ಸಮಾಜಕ್ಕೆ ತಿಳಿಸುವುದು, ವ್ಯಸನಮುಕ್ತ, ಸಮ ಸಮಾಜ ನಿರ್ಮಾಣ, ಅಂಧ ಶ್ರದ್ಧೆ ಅಳಿಸಿ, ಸುಜ್ಞಾನ ಬೆಳೆಸುವುದು, ಯುವ ಸಮುದಾಯದಲ್ಲಿ ಬಸವ ಚಿಂತನೆ ಬಿತ್ತುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.  ಅಭಿಯಾನದ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅಥಣಿ ಎಸ್. ವೀರಣ್ಣ, ಅಧ್ಯಕ್ಷ ಅಣಬೇರು ರಾಜಣ್ಣ, ಎಂ.ಶಿವಕುಮಾರ್, ಸೋಗಿ ಶಾಂತಕುಮಾರ್, ಎಸ್. ಓಂಕಾರಪ್ಪ ಇದ್ದರು.