ಜಿಲ್ಲೆ

ದಾವಣಗೆರೆಯಲ್ಲಿ 15 ರಂದು ಬಸವ ಸಂಸ್ಕೃತಿ ಅಭಿಯಾನ

ರಮೇಶ ಜಹಗೀರದಾರ್

ದಾವಣಗೆರೆ : ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆಯೋಜಿಸಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಸೆ. 15 ರಂದು ದಾವಣಗೆರೆಯಲ್ಲಿ ದೊಡ್ಡಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಜಿಲ್ಲಾ ಸ್ವಾಗತ ಸಮಿತಿಯ ಅಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.  ನಗರದ ಶಿವಯೋಗಿ ಮಂದಿರ ಆವರಣದಲ್ಲಿ ಶುಕ್ರವಾರ ಅಭಿಯಾನದ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.  ಅಭಿಯಾನವು ಸೆ. 1 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆಯಾಗಿದ್ದು ಅ. 5 ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಅಂದು 400ಕ್ಕೂ ಹೆಚ್ಚು ಮಠಾಧೀಶರು, ಲಕ್ಷಾಂತರ ಜನರು ಸಮಾವೇಶಗೊಳ್ಳಲಿದ್ದಾರೆ ಎಂದರು.  ಅಭಿಯಾನವು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಸೆ. 15 ರಂದು ದಾವಣಗೆರೆಗೆ ಆಗಮಿಸಲಿದೆ. ಇಲ್ಲಿನ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.  ಬಸವಣ್ಣ ಅವರು 800 ವರ್ಷಗಳ ಹಿಂದೆ ಸಮಾಜದಲ್ಲಿ ಕ್ರಾಂತಿಯನ್ನು ಮಾಡಿದರು. ಅವರು ಬರೆದ ವಚನಗಳನ್ನು ಓದಿದರೆ ಬದುಕು ಬದಲಾಗುತ್ತದೆ. ಅಭಿಯಾನದ ಮೂಲಕ ಆ ತತ್ವಗಳ ಸಂದೇಶವನ್ನು ಜನಮಾನಸಕ್ಕೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.  ಅಭಿಯಾನದ ಪೂರ್ವಭಾವಿಯಾಗಿ 4 ಪ್ರಚಾರ ವಾಹನಗಳು ಶನಿವಾರದಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಂಚರಿಸಲಿವೆ ಎಂದು ಹೇಳಿದರು.  ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಮೂಲಕ ಬಸವ ತತ್ವಗಳನ್ನು ಮನೆ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಹೋದ ಕಡೆಗೆಲ್ಲ ಅಭಿಯಾನಕ್ಕೆ ಅದ್ಭುತ ಸ್ವಾಗತ ದೊರೆತಿದೆ ಎಂದು ತಿಳಿಸಿದರು.  ಬಸವ ತತ್ವಗಳು ಲಿಂಗಾಯತರಿಗೆ ಸೀಮಿತವಾಗಿಲ್ಲ. ಅವು ಮನುಕುಲದ ಆಸ್ತಿಯಾಗಿವೆ. ಈ ತತ್ವಗಳನ್ನು ಬಿಟ್ಟರೆ ಲಿಂಗಾಯತರಿಗೆ ಅಸ್ತಿತ್ವವೇ ಇಲ್ಲ. ಜಗತ್ತಿನ ಎಲ್ಲ ಕಾನೂನುಗಳ ಸಾರ ವಚನಗಳಲ್ಲಿದೆ ಎಂದು ಹೇಳಿದರು.  ಮನುಷ್ಯರೆಲ್ಲರೂ ಒಂದೇ. ಎಲ್ಲರೂ ಸಮಾಜದಲ್ಲಿ ಸೌಹಾರ್ದತೆಯಿಂದ ಜೀವನ ಸಾಗಿಸಬೇಕು ಎಂಬ ಸಂದೇಶದ ಜತೆಗೆ ಕಾಯಕ, ದಾಸೋಹ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೇಳಿಕೊಟ್ಟರು. ಈ ಆದರ್ಶಗಳನ್ನು ಯುವಜನರಿಗೆ ತಿಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.  ಸೆ. 15 ರಂದು ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಅಂದು ಸಂಜೆ ಮೋತಿ ವೀರಪ್ಪ ಕಾಲೇಜು ಆವರಣದಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ವರೆಗೆ ಸಾಮರಸ್ಯದ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು.  ಸ್ವಾಗತ ಸಮಿತಿಯ ಉಪಾಧ್ಯಕ್ಷ ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಸ್. ಮಂಜುನಾಥ ಕುರ್ಕಿ, ಸಂಚಾಲಕ ಕೆ.ಬಿ. ಪರಮೇಶ್ವರಪ್ಪ, ಕೋಶಾಧ್ಯಕ್ಷ ಐಗೂರು ಸಿ. ಚಂದ್ರಶೇಖರ, ಆವರಗೆರೆ ರುದ್ರಮುನಿ, ಬಿ.ಎಂ. ವಿಶ್ವೇಶ್ವರಯ್ಯ, ಎಚ್.ಆರ್. ಲಿಂಗರಾಜ್, ರುದ್ರಗೌಡ ಗೋಪನಾಳು, ವನಜಾ, ಕುಸುಮಾ, ಮಮತಾ, ಅರುಣ ಕುಮಾರ ಕುರುಡಿ, ಅನೀಸ್ ಪಾಷಾ ಇದ್ದರು.