ಜಿಲ್ಲೆ

ದತ್ತಮಾಲಾ ಅಭಿಯಾನ 4 ರಿಂದ

ರಮೇಶ ಜಹಗೀರದಾರ್

ದಾವಣಗೆರೆ: ನ. 4 ರಿಂದ 10 ರ ವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಪರಶುರಾಮ ನಡುಮನಿ ಹೇಳಿದರು.  ನಗರದ ಜಯದೇವ ವೃತ್ತದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸೋಮವಾರ ಮಾಲಾಧಾರಣೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ನ.7 ರಂದು ದತ್ತ ದೀಪೋತ್ಸವ, 9 ರಂದು ಪಡಿ ಸಂಗ್ರಹ ನಡೆಯಲಿದ್ದು, ಸುಮಾರು 200 ಭಕ್ತರು ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳಲಿದ್ದಾರೆ ಎಂದರು.  ನ.10ರಂದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ದತ್ತಪೀಠದಲ್ಲಿ ಧರ್ಮಸಭೆ, ಶೋಭಾಯಾತ್ರೆ, ಹೋಮ, ಹವನ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.  ಜೇವರ್ಗಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಗಾಣಗಾಪುರದ ವಿವೇಕ ಚಿಂತಾಮಣಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆಯುವ ಧರ್ಮಸಭೆಯಲ್ಲಿ ಹಿಂದು ನಾಯಕಿ ಮಾಧವಿಲತಾ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಂಸದ ಪ್ರತಾಪ್‌ಸಿಂಹ, ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  ದತ್ತಪೀಠದಲ್ಲಿರುವ ಅನಧಿಕೃತ ಇಸ್ಲಾಂ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು, ದತ್ತ ಭಕ್ತರಿಗೆ ಮಹಾಪ್ರಸಾದ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು, ಪೀಠದಲ್ಲಿ ಕಳವಾದ ಎಲ್ಲ ವಸ್ತುಗಳನ್ನು ಪೀಠಕ್ಕೆ ಹಿಂತಿರುಗಿಸಬೇಕು, ಗಾಣಗಾಪುರದಿಂದ ದತ್ತಪೀಠಕ್ಕೆ ಪ್ರತಿದಿನ ಬಸ್ ಸೇವೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ್, ಸಂಘಟನಾ ಕಾರ್ಯದರ್ಶಿ ಶ್ರೀಧರ್, ರಾಜು, ಪಳನಿ ಸುದ್ದಿಗೋಷ್ಠಿಯಲ್ಲಿದ್ದರು.