ರಾಯಲ್ಪಾಡು: ಅಕ್ರಮ ಸಂಬಂಧ ಮಾಡದಂತೆ ಬುದ್ಧಿ ಹೇಳಿದ ಅತ್ತೆ ಮೇಲೆ ಸೊಸೆ, ಪ್ರಿಯಕರನೊಂದಿಗೆ ಸೇರಿ ಹಲ್ಲೆ ಮಾಡಿರುವ ಪ್ರಕರಣ ಹೋಬಳಿ ಸಮೀಪದ ತುಮ್ಮಲಪಲ್ಲಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೊಸೆ ರೇಖಾ (28), ಪ್ರಿಯಕರ ಶಶಿಕುಮಾರ್ (28) ಆರೂಪಿಗಳು, ಅತ್ತೆ ರಮಣಮ್ಮ (57) ಗಾಯಾಳು.
ಕಳೆದ 7 ವರ್ಷಗಳ ಹಿಂದೆ ತುಮ್ಮಲಪಲ್ಲಿ ಗ್ರಾಮದ ಮಂಜುನಾಥ್ ರೆಡ್ಡಿಯನ್ನು ಆಂಧ್ರಪ್ರದೇಶ ಮೂಲದ ರೇಖಾ ಪ್ರೀತಿಸಿ ಮದುವೆಯಾಗಿದ್ದಳು. ಬಳಿಕ ಶಶಿಕುಮಾರ್ನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ.
ಈ ವಿಷಯವಾಗಿ ಗಂಡ & ಹೆಂಡತಿ ಮಧ್ಯೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಮಯದಲ್ಲಿ ಅತ್ತೆ ಅಕ್ರಮ ಸಂಬಂಧವನ್ನು ಬಿಡುವಂತೆ ಹಾಗೂ ಮೊಬೈಲ್ ಬಳಸದಂತೆ ಬುದ್ಧಿ ಹೇಳಿದ್ದರು. ಆದರೂ ರೇಖಾ ಗಂಡ ಮತ್ತು ಅತ್ತೆಗೆ ಗೊತ್ತಾಗದಂತೆ ಮೊಬೈಲ್ ಬಳಕೆ ಮಾಡುತ್ತಿದ್ದಳು. ಇದು ಅತ್ತೆಗೆ ತಿಳಿದು ಮತೊಮ್ಮೆ ತಿಳಿ ಹೇಳಿದ್ದಕ್ಕೆ ಕೋಪಗೊಂಡು ಪ್ರಿಯಕರ ಶಶಿಕುಮಾರ್ ಜತೆ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.