ಮಡಿಕೇರಿ:
ಅಮರ ಸುಳ್ಯ ಹೋರಾಟ ಮೂಲಕ ಭಾರತದ ಸ್ವಾತಂತ್ರ‍್ಯ ಸಂಗ್ರಾಮ ಪ್ರಾರಂಭವಾಗಿದ್ದೇ ಕೊಡಗಿನಿಂದ ಎಂದು ಮಡಿಕೇರಿ ಸÀರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಾಪಕಿ ಡಾ. ಎಸ್.ಜಿ. ಚೈತ್ರಾ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಹಕಾರ ಸಂಘಗಳ ತರಬೇತಿ ಕೇಂದ್ರದ ಆಶ್ರಯದಲ್ಲಿ ಬುಧವಾರ ನಡೆದ ದಿ. ಗಂಗಾಧರ್ ಶೇಠ್, ಸುಲೋಚನಭಾಯಿ ಸ್ಮಾರಕ ದತ್ತಿ ಹಾಗೂ ದಿ. ಡಿ. ಜೆ.ಪದ್ಮನಾಭ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನ ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಮಾತನಾಡಿದರು.
1837ರಲ್ಲಿ ನಡೆದ ಅಮರ ಸುಳ್ಯ ಹೋರಾಟ ಮೊದಲ ಸ್ವಾತಂತ್ರ‍್ಯ ಸಂಗ್ರಾಮವಾಗಿದ್ದು ಆಗ ಸುಳ್ಯ ಪ್ರದೇಶ ಕೊಡಗು ಜಿಲ್ಲೆಗೆ ಸೇರಿತ್ತು. ಅಂದು ಕೊಡಗಿನ ವ್ಯಾಪ್ತಿ ತುಂಬ ದೊಡ್ಡದಿತ್ತು. ಹಾಲೇರಿ ವಂಶದ ಆಡಳಿತ ಮುಗಿದು ಬ್ರಿಟಿಷರ ಆಡಳಿತ ಪ್ರಾರಂಭವಾದಾಗ ಕರ ಶೇಕರಣೆ ವಿಧಾನ ಬದಲಾಯಿಸಲಾಯಿತು. ಹಾಲೇರಿ ವಂಶಸ್ಥರ ಆಡಳಿತದಲ್ಲಿ ವಸ್ತು ರೂಪದಲ್ಲಿ ಕರ ಸಂಗ್ರಹಣೆ ಮಾಡುತ್ತಿದ್ದರು. ಆದರೆ ಬ್ರಿಟಿಷರು ಹಣ ರೂಪದಲ್ಲಿ ಸಂಗ್ರಹ ಮಾಡಲು ಪ್ರಾರಂಭಿಸಿದಾಗ ಸಹಜವಾಗಿಯೇ ಜನರಲ್ಲಿ ಬ್ರಿಟಿಷರ ವಿರುದ್ಧ ಮುನಿಸು ಮೂಡಿತು. ಆ ಸಂದರ್ಭದಲ್ಲಿ ಸ್ವಾಮಿ ಅಪರಾಂಪರ ಮತ್ತು ಇತರರು ಸ್ವಾತಂತ್ರ‍್ಯ ಸಂಗ್ರಾಮ ಪ್ರಾರಂಭಿಸಿದರು. ಆದರೆ ಇತಿಹಾಸದಲ್ಲಿ ಮತ್ತು ಪಠ್ಯ ಪುಸ್ತಕಗಳಲ್ಲಿ ಅದೊಂದು ರೈತ ದಂಗೆ ಎಂದು ಬಿಂಬಿಸಲಾಗಿದೆ ಎಂದರು.
ಕೊಡಗಿನ ಜನಪದ ಕಲೆಗಳ ಕುರಿತು ಮಾತನಾಡಿದ ಚೆರಂಬಾಣೆಯ ಶಿಕ್ಷಕಿ ಬೃಂದಾ ಕವನ್ ಕುದುಪಜೆ ಕೊಡಗಿನಲ್ಲಿ ಕೃಷಿ ಸಂದರ್ಭದಲ್ಲಿ, ಹಬ್ಬ ಹರಿದಿನಗಳಲ್ಲಿ ಆಡುವ ಮಾತು ಮತ್ತು ಹಾಡುಗಳು ಕೂಡ ಜನಪದೀಯವಾಗಿರುತ್ತದೆ. ಉಮ್ಮತ್ತಾಟ್, ಕೋಲಾಟ್, ಬೊಳಕಾಟ್ ಜನಪ್ರಿಯಗೊಂಡಿದ್ದರೂ ಹತ್ತು ಹಲವು ಜನಪದೀಯ ಕಲೆಗಳು ಕೊಡಗಿನಲ್ಲಿವೆ. ಕೊಂಬಾಟ್ ನಮ್ಮೆ, ದುಡಿ ಕೊಟ್ಟು, ಪುತ್ತರಿ ಪಾಟ್, ಎರವ ಕೊಟ್ಟು, ಕಪ್ಪೆ ಆಟ್, ಕುಡಿಯರ ಕುಣಿತ, ಕುರುಬಾಟ, ಕುಂಬುಕೊಟ್ಟ್ ವಾಲಗ, ಜೋಯಿಪಾಟು, ಭೂತ ನೃತ್ಯ, ಡೋಲು ಪಾಟ್, ಪರೆಯಕಳಿ, ಪಿಲಿಯಾಟ್, ಬಾಳೋ ಪಾಟ್, ಬಿಲ್ಲಾಟ್, ವಾಲಗದಾಟ್ ಹೀಗೆ ಹಲವು ರೀತಿಯ ಜನಪದೀಯ ಕಲೆಗಳು ಇವೆ. ಅವುಗಳನ್ನು ಹಬ್ಬ ಹರಿದಿನಗಳಲ್ಲಿ, ಹುತ್ತರಿ ಮಂದ್‌ಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಸಂಘಗಳ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ಆರ್.ಎಸ್. ರೇಣುಕಾ ಕಾರ್ಯಕ್ರಮ ಉದ್ಘಾಟಿಸಿದರು. ದತ್ತಿ ದಾನಿಗಳಾದ ಎಂ.ಜಿ. ಮೋಹನ್, ಪ್ರೊ. ದಂಬೆಕೊಡಿ ಸುಶೀಲ ಸುಬ್ರಮಣಿ, ಮಡಿಕೇರಿ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಅಂಬೇಕಲ್ ನವೀನ್, ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎನ್. ಪುರುಷೋತ್ತಮ್, ಪ್ರಮುಖರಾದ ವಾಸು ರೈ, ಕಟ್ಟೆಮನೆ ಮಹಾಲಕ್ಷ್ಮಿ, ಅಮ್ಮಾಟಂಡ ಬೃಂದ, ಮೂಡಗದ್ದೆ ವಿಕ್ರಂ, ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳು ಇದ್ದರು.