ಹುಬ್ಬಳ್ಳಿ: ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಕಂಪನಿ ಹಾಗೂ ಟ್ರಿನಿಟಿ ಟೆಕ್ನಾಲಜಿಸ್ ಆ್ಯಂಡ್ ಸ್‌ಟಾವೇರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಇಲ್ಲಿನ ತೋಳನಕೆರೆ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆ(ಸವಾರಿ ಹಬ್ಬ)ಯಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
‘ಬೈಸಿಕಲ್ ಬಳಸಿ ಪರಿಸರ ಉಳಿಸಿ’ ವಿಷಯ ಕುರಿತ ಚಿತ್ರಕಲೆ ಸ್ಪರ್ಧೆಯಲ್ಲಿ 8, 9 ಹಾಗೂ 10ನೇ ತರಗತಿ (ಪ್ರೌಢಶಾಲೆ ವಿಭಾಗ) ಮತ್ತು 5, 6 ಹಾಗೂ 7ನೇ ತರಗತಿ (ಪ್ರಾಥಮಿಕ ಶಾಲೆ ವಿಭಾಗ) ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಎರಡೂ ವಿಭಾಗದ ಸ್ಪರ್ಧೆಯಲ್ಲಿ ಮೂರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಚಿತ್ರ ಬಿಡಿಸಿ ಖುಷಿಪಟ್ಟರು.
ಪ್ರೌಢಶಾಲೆ ವಿಭಾಗದಲ್ಲಿ ಸುಖದಾ ಮುರಗೋಡ (ಪ್ರಥಮ), ಸಹನಾ ಧಾಗೆ (ದ್ವಿತೀಯ), ಶಿವಾನಿ ರೇವಣಕರ (ತೃತೀಯ), ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸಾನ್ವಿ ಯರಗೊಪ್ಪ (ಪ್ರಥಮ), ಪಿಹೂ ಕಬಾಡೆ (ದ್ವಿತೀಯ), ವಾಸುಕಿ ಕುಲಕರ್ಣಿ (ತೃತೀಯ) ಅವರು ನಗದು ಹಾಗೂ ಶೀಲ್ಡ್‌ಗಳನ್ನು ಬಹುಮಾನವಾಗಿ ಪಡೆದರು.
ಮುಖ್ಯ ತೀರ್ಪುಗಾರ್ತಿ ದೀಪಾ ಜೈನ್, ಮೌಲ್ಯಮಾಪಕರು ಹಾಗೂ ಶಿಕ್ಷಕರಾದ ಮೋಹನ ಮಿರಾಂದ, ಗೋವಿಂದರೆಡ್ಡಿ ಕಿತ್ತೂರ, ನಾರಾಯಣ ಯರಗುಪ್ಪಿ, ಶಾಂತಯ್ಯ ತಂಬೂರ, ನಿರೂಪಕ ಆರ್‌ಜೆ ರಸೀದ್ ಅವರನ್ನು ಗೌರವಿಸಲಾಯಿತು.
‘ವಿಜಯವಾಣಿ’ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ಸ್ಮಾರ್ಟ್‌ಸಿಟಿ ಕಂಪನಿ ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ, ಟ್ರಿನಿಟಿ ಟೆಕ್ನಾಲಜಿಸ್‌ನ ವ್ಯವಸ್ಥಾಪಕ ನಿರ್ದೇಶಕ ರಜನೀಶ ಗಂಜಾಳ ಇತರರು ಇದ್ದರು.